ಜಿಲ್ಲೆಯ ಐದು ಶಾಸಕರ ನೇತೃತ್ವದಲ್ಲಿ ಸದೃಢ ಸಂಘಟನೆ: ಜಿಲ್ಲಾಧ್ಯಕ್ಷ ಡಾ.ಅಂಶುಮಂತ್

KannadaprabhaNewsNetwork | Published : Oct 23, 2023 12:15 AM

ಸಾರಾಂಶ

ಜಿಲ್ಲೆಯ ಐದು ಶಾಸಕರ ನೇತೃತ್ವದಲ್ಲಿ ಸದೃಢ ಸಂಘಟನೆ: ಜಿಲ್ಲಾಧ್ಯಕ್ಷ ಡಾ.ಅಂಶುಮಂತ್
ಕನ್ನಡಪ್ರಭ ವಾರ್ತೆ, ತರೀಕೆರೆ ಜಿಲ್ಲೆಯ ಐದು ಜನ ಶಾಸಕರ ನೇತೃತ್ವದಲ್ಲಿ ಗಟ್ಟಿಯಾಗಿ ಪಕ್ಷದ ಸಂಘಟನೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಹೇಳಿದ್ದಾರೆ. ಭಾನುವಾರ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಹೆಚ್ಚು ಸದೃಢವಾಗಿ ಸಂಘಟಿಸಲಾಗುತ್ತಿದೆ. ಬರಲಿರುವ ನೈರುತ್ಯ ಕ್ಷೇತ್ರದ ಪದವೀಧರ, ಶಿಕ್ಷಕರ ಕ್ಷೇತ್ರ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಗೆಲುವು ಸಾಧಿಸುತ್ತಿದೆ. ಐದು ಜನ ಶಾಸಕರು ಜನಪರವಾಗಿ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಪ್ರತಿ ಹಳ್ಳಿಗೆ ಭೇಟಿ ನೀಡುತ್ತಿದ್ದಾರೆ. ಚುನಾವಣೆ ನಂತರದಲ್ಲಿ ಮತದಾರರನ್ನು ಭೇಟಿಯಾಗುತ್ತಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದು ಕಾಂಗ್ರೆಸ್ ಪಕ್ಷದ ಇಡೀ ತಂಡದ ಪ್ರಯತ್ನ. ನುಡಿದಂತೆ ನಡೆಯುತ್ತಿದ್ದೇವೆ ಎಂಬ ಆತ್ಮವಿಶ್ವಾಸ ಇದೆ, ಅಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗುತ್ತಿದೆ ಎಂದು ಹೇಳಿದರು. ಹತಾಶರಾದ ಬಿಜೆಪಿ ಮುಖಂಡರು: ಸೋಲಿನಿಂದ ಬಿಜೆಪಿ ಮುಖಂಡರು ಹತಾಶರಾಗಿದ್ದಾರೆ. ಬಿಜೆಪಿ ಮುಖಂಡರು ಚೇತರಿಸಿಕೊಂಡಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ, ಪಕ್ಷದ ಮುಖಂಡರಾದ ಈಶ್ವರಪ್ಪ ಹತಾಶರಾಗಿದ್ದಾರೆ. ಬಿಜೆಪಿಗೆ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲು ಇಲ್ಲಿಯವರೆಗೂ ಆಗಿಲ್ಲ, ರಾಜ್ಯದಲ್ಲಿ ಬರ ಇದೆ, ವಿರೋಧ ಪಕ್ಷದ ನಾಯಕರು ರಚನಾತ್ಮಕ ಕಾರ್ಯ ಮಾಡಬೇಕಿತ್ತು, ಉಡುಪಿ-ಚಿಕ್ಕಮಗಳೂರು ಸಂಸದರು, ಕೇಂದ್ರ ಸಚವರು, ಈ ಭಾಗದ ಜನಪ್ರತಿನಿಧಿಗಳು ಆದರೆ ಅವರು ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಬರಲಿರುವ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ, ಜಿಲ್ಲಾ ಪಂಚಾಯಿತಿ, ತಾಪಂ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷ ಖಂಡಿತ ಗೆಲುವು ಸಾಧಿಸುತ್ತದೆ ಎಂದು ತಿಳಿಸಿದ ಅವರು ತರೀಕೆರೆ ವಿಧಾನಸಭಾ ಕ್ಷೇತ್ರದ ಅಜ್ಜಂಪುರ ಬ್ಲಾಕ್ ಕಾಂಗ್ರೆಸ್‌ ನಿಂದ ಜಿ.ನಟರಾಜ್ ಅವರಿಗೆ ಕೆಪಿಸಿಸಿ ಸದಸ್ಯರನ್ನಾಗಿ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಎನ್.ಎಂ.ದಯಾನಂದ್ ಅವರಿಗೆ ಪಕ್ಷ ನೀಡಿರುವ ನೇಮಕಾತಿ ಪತ್ರ ವಿತರಿಸಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಚುನಾವಣಾ ಪೂರ್ವದಲ್ಲಿ ತಾವು ಭರವಸೆ ನೀಡಿದಂತೆ ತರೀಕೆರೆ ಪಟ್ಟಣದಲ್ಲಿ ಚತುಷ್ಪದ ರಸ್ತೆ ಅಬಿವೃದ್ದಿ, 24x7 ಕುಡಿಯುವ ನೀರು ಸರಬರಾಜು, ನಿವೇಶನ ವಿತರಣೆ, ಒಳಚರಂಡಿ ಯೋಜನೆಗಳನ್ನು ಖಂಡಿತ ಒಂದು ವರ್ಷದೊಳಗೆ ನೆರವೇರಿಸಲಾಗುತ್ತದೆ. ವಿವಿಧ ಬಾಬ್ತುಗಳಿಂದ ರಸ್ತೆ ಅಭಿವೃದ್ದಿಗೆ ಈಗಾಗಲೇ ಹಣ ಮಂಜೂರಾಗುತ್ತಿದೆ. ಇನ್ನು ಎರಡು ಮೂರು ತಿಂಗಳೊಳಗೆ ಟೆಂಡರ್ ಕರೆಯಲಾಗುತ್ತದೆ. ಕ್ರೀಡಾಂಗಣ ನಿರ್ಮಾಣ, ಕೆಎಸ್ಆರ್ಟಿಸಿ ಡಿಪೋ ಖಂಡಿತವಾಗಿ ನಿರ್ಮಿಸಲಾಗುವುದು ಇವುಗಳೆಲ್ಲವನ್ನೂ ಮಂಜೂರು ಮಾಡಿಕೊಡಲು ಸಹಕರಿಸುತ್ತಿರುವ ಸಚಿವ ಬೈರತಿ ಸುರೇಶ್ ಅವರಿಗೆ ಧನ್ಯವಾದಗಳು, ಕೆಪಿಸಿಸಿ ಸದಸ್ಯರಾಗಿ ನೇಮಕಗೊಂಡಿರುವ ಜಿ.ನಟರಾಜ್ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿರುವ ಎನ್.ಎಂ.ದಯಾನಂದ್ ಅವರಿಗೆ ಅಭಿನಂದನೆ ತಿಳಿಸಿದರು. ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ಡಾ.ಅಂಶುಮಂತ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಇಂದಿಗೆ ನಾಲ್ಕು ವರ್ಷವಾಗಿದೆ, ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಜಿಲ್ಲಾಧ್ಯಕ್ಷರು ಡಾ.ಅಂಶುಮಂತ್ ಮತ್ತು ಶಾಸಕ ಜಿ.ಎಚ್.ಶ್ರೀನಿವಾಸ್ ಸರಳ ವ್ಯಕ್ತಿಗಳು, ಡಾ.ಆಂಶುಮಂತ್ ಅವರು ಪಕ್ಷ ಸಂಘಟನೆಯಲ್ಲಿ ಮತ್ತು ಶಾಸಕ ಜಿ.ಎಚ್.ಶ್ರೀನಿವಾಸ್ ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ಸ್ವಇಚ್ಚೆಯಿಂದ ತೊಡಗಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಎಸ್.ಸಿ.ಸೆಲ್ ಅಧ್ಯಕ್ಷರು ಬಿ.ಜಿ.ಗೌರೀಶ್, ಪುರಸಭೆ ಮಾಜಿ ಸದಸ್ಯ ಅದಿಲ್ ಪಾಷ, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. 22ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿದರು. ಶಾಸಕ ಜಿ.ಎಚ್.ಶ್ರೀನಿವಾಸ್, ಬ್ಲಾಕ್ ಕಾಂಗ್ಹೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಕಾಂಗ್ರೆಸ್ ಸಮಿತಿ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಇದ್ದಾರೆ.

Share this article