ಬಲವಾಗಿ ಬೀಸುತ್ತಿರುವ ಗಾಳಿ - ಧರೆಗುರುಳುತ್ತಿರುವ ವಿದ್ಯುತ್‌ ಕಂಬ, ಮರಗಳು

KannadaprabhaNewsNetwork | Published : Jul 23, 2024 12:35 AM

ಸಾರಾಂಶ

ಚಿಕ್ಕಮಗಳೂರು, ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಆರ್ಭಟ ತಣ್ಣಗಾಗಿದೆ. ಆದರೆ, ಬಲವಾಗಿ ಬೀಸುತ್ತಿರುವ ಗಾಳಿಗೆ ಹಲವೆಡೆ ಅವಘಡಗಳು ಸಂಭವಿಸುತ್ತಿರುವ ಮಲೆನಾಡಿನ ಜನರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಹಲವೆಡೆ ಅವಘಡ । ಮಲೆನಾಡಿನ ಜನರಲ್ಲಿ ಮತ್ತೆ ಆತಂಕ । ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಆರ್ಭಟ ತಣ್ಣಗಾಗಿದೆ. ಆದರೆ, ಬಲವಾಗಿ ಬೀಸುತ್ತಿರುವ ಗಾಳಿಗೆ ಹಲವೆಡೆ ಅವಘಡಗಳು ಸಂಭವಿಸುತ್ತಿರುವ ಮಲೆನಾಡಿನ ಜನರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಮರಗಳು ಮತ್ತು ವಿದ್ಯುತ್‌ ಕಂಬಗಳು ನಿರಂತರವಾಗಿ ಬೀಳುತ್ತಿರುವುದರಿಂದ ಹಲವೆಡೆ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಮಲೆನಾಡಿನ ಕೆಲವು ಕುಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ 66 ಕೆ.ವಿ. ವಿದ್ಯುತ್‌ ಲೈನ್‌ನ ಕಂಬವೊಂದು ಗಾಳಿಗೆ ಮುರಿದು ಬಿದ್ದಿದೆ. ಹಾಗಾಗಿ ಆಲ್ದೂರು ಹೋಬಳಿಯ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಮೂಡಿಗೆರೆ ತಾಲೂಕಿನ ತುಂಬರಗಡಿ ಗ್ರಾಮದಲ್ಲಿ ದಿವೀತ್‌ ಸೋಮವಾರ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಕಂಬ ಮೇಲೆ ಬಿದ್ದಿದೆ. ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಚಂಡಗೋಡು ಗ್ರಾಮದಲ್ಲಿ ಮನೆಯೊಂದರಲ್ಲಿ ಮೂವರು ಮಲಗಿದ್ದರು. ಗಾಳಿಗೆ ಮನೆಯ ಗೋಡೆ ಬಿದ್ದಿದೆ. ಮನೆಯಲ್ಲಿದ್ದವರು ಮೂವರು ಪಾರಾಗಿದ್ದಾರೆ. 1849 ವಿದ್ಯುತ್‌ ಕಂಬಗಳಿಗೆ ಹಾನಿ:

ಈ ವರ್ಷದಲ್ಲಿ ಭಾರೀ ಗಾಳಿ ಮತ್ತು ಮಳೆಗೆ ಜಿಲ್ಲೆಯಲ್ಲಿ ಈವರೆಗೆ 1849 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಈ ಪೈಕಿ ಚಿಕ್ಕಮಗಳೂರು, ಮೂಡಿಗೆರೆ, ಎನ್‌.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಹೆಚ್ಚು ಕಂಬಗಳು ಬಿದ್ದಿವೆ. 36.98 ಕಿ.ಮೀ. ವಿದ್ಯುತ್‌ ತಂತಿಗಳಿಗೂ ಹಾನಿಯಾಗಿದೆ. ಒಟ್ಟಾರೆ 3.15 ಕೋಟಿ ರು. ನಷ್ಟ ಸಂಭವಿಸಿದೆ.

ಹಾನಿಯಾಗಿರುವ ಕಂಬಗಳ ಪೈಕಿ 1493 ಕಂಬಗಳನ್ನು ಬದಲಾವಣೆ ಮಾಡಲಾಗಿದೆ. ಮಲೆನಾಡಿನ ಕೆಲವು ಗ್ರಾಮಗಳಲ್ಲಿ ಬದಲಾವಣೆ ಮಾಡಲು ಮಳೆ ಮತ್ತು ಮುಂದುವರಿದ ಗಾಳಿಯಿಂದ ಅಡ್ಡಿಯಾಗಿದೆ. ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

192 ಮನೆಗಳಿಗೆ ಹಾನಿ ಸಂಭವಿಸಿದೆ. ಇವುಗಳ ಪೈಕಿ ಕೆಲವು ಮನೆಗಳ ಮೇಲೆ ಗಾಳಿಗೆ ಮರಗಳು ಬಿದ್ದಿದ್ದರೆ, ಮತ್ತೆ ಕೆಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಒಟ್ಟಾರೆ, ಒಂದೆರಡು ದಿನಗಳಿಂದ ಬೀಸುತ್ತಿರುವ ಗಾಳಿ ಜನರಲ್ಲಿ ಆತಂಕ ಉಂಟು ಮಾಡಿದೆ.

--- ಬಾಕ್ಸ್‌ ---50 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಆದರೆ, ಗಾಳಿಯ ಪ್ರಮಾಣ ಹೆಚ್ಚಳವಾಗಿದೆ. ಸದ್ಯ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಗಾಳಿಯಿಂದ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಆಗಬಾರದೆಂಬ ಉದ್ದೇಶದಿಂದ ಹಲವೆಡೆ ರಸ್ತೆಯ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಪ್ರಮುಖವಾಗಿ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಹಾಗೂ ತೀರ್ಥಹಳ್ಳಿ- ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.- ಮೀನಾ ನಾಗರಾಜ್‌

ಜಿಲ್ಲಾಧಿಕಾರಿ 22 ಕೆಸಿಕೆಎಂ 4

- 22 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ 66 ಕೆ.ವಿ. ಲೈನ್‌ನ ವಿದ್ಯುತ್‌ ಕಂಬ ಗಾಳಿಗೆ ತುಂಡಾಗಿರುವುದು.-- 22 ಕೆಸಿಕೆಎಂ 6ಮೂಡಿಗೆರೆ ತಾಲೂಕಿನ ತುಂಬರಗಡಿ ಗ್ರಾಮದಲ್ಲಿ ದಿವೀತ್‌ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಕಂಬ ಮೈ ಮೇಲೆ ಬಿದ್ದು ಗಾಯಗೊಂಡಿರುವುದು.

-- 22 ಕೆಸಿಕೆಎಂ 7ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಸೋಮವಾರ ಮರಗಳನ್ನು ಕಡಿತಲೆ ಮಾಡುತ್ತಿರುವುದು.

--

Share this article