ಕನ್ನಡಪ್ರಭ ವಾರ್ತೆ ಸಾಗರ
ಸಭೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡವೆಂದು ಹಿಂದಿನ ಎಲ್ಲ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತಾ ಬಂದಿದ್ದು, ಮತ್ತೆ ಮತ್ತೆ ಅದನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಾರಿ ಆಕ್ಷೇಪಣೆ ಸಲ್ಲಿಸಲು ಸೆ. ೨೫ ಕೊನೆ ದಿನವಾಗಿದ್ದು, ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗುತ್ತಿದೆ. ಈಗಾಗಲೆ ಸಾಗರ ತಾಲೂಕು ಮೂರು ಬಾರಿ, ಹೊಸನಗರ ತಾಲೂಕು ಆರು ಬಾರಿ ಮುಳುಗಡೆಯಿಂದ ಹೈರಾಣಾಗಿ ಹೋಗಿದ್ದು, ಕಳೆದ ೬೫ ವರ್ಷಗಳಿಂದ ಮುಳುಗಡೆ ಸಂತ್ರಸ್ತರಿಗೆ ನಾಗರಿಕ ಸೌಲಭ್ಯ ಕೊಟ್ಟಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಾವು ಮತ್ತೆ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಅಭಯಾರಣ್ಯ ಕಾಯ್ದೆಯಿಂದಲೇ ಮಲೆನಾಡು ಹಳ್ಳಿಗಾಡಿನ ಜನರು ಬದುಕಲು ಆಗುತ್ತಿಲ್ಲ. ಇನ್ನು ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ನೇರವಾಗಿ ನಮ್ಮನ್ನು ಒಕ್ಕಲೆಬ್ಬಿಸದೆ ಇದ್ದರೂ ಪ್ರತಿದಿನ ಕಠಿಣ ಕಾನೂನು ಹೇರಿ ನಾವೇ ಅಲ್ಲಿಂದ ಓಡಿ ಹೋಗುವಂತೆ ಮಾಡುವ ತಂತ್ರಗಾರಿಕೆ ಅಡಗಿದೆ ಎಂದು ಹೇಳಿದರು.
ಈಗಾಗಲೆ ಹೊಸನಗರ ತಾಲೂಕಿನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಿದೆ. ಹೊಸನಗರ ನಂತರ ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರದಲ್ಲೂ ಪಾದಯಾತ್ರೆ ನಡೆಸಲಾಗುತ್ತಿದ್ದು, ಅಕ್ಟೋಬರ್ ಅಂತ್ಯದಲ್ಲಿ ಶಿವಮೊಗ್ಗದಲ್ಲಿ ೧ಲಕ್ಷಕ್ಕೂ ಅಧಿಕ ರೈತರು, ಸಹಕಾರಿಗಳನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಗೆ ಮುಖ್ಯಮಂತ್ರಿಗಳನ್ನು ಸಚಿವರನ್ನು, ಕೇಂದ್ರ ಸಚಿವರು, ಸಂಸದರು, ಶಾಸಕರನ್ನು ಆಹ್ವಾನಿಸಿ ಅವರಿಗೆ ಮನವಿ ನೀಡುವ ಉದ್ದೇಶ ಹೊಂದಲಾಗಿದೆ. ಕಸ್ತೂರಿ ರಂಗನ್ ವರದಿ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯಬೇಕು.ಶೀಘ್ರದಲ್ಲಿಯೆ ಮುಖ್ಯಮಂತ್ರಿಗಳನ್ನು ನಿಯೋಗದ ಮೂಲಕ ಭೇಟಿ ಮಾಡಿ, ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಚೇತನರಾಜ್ ಕಣ್ಣೂರು, ಬಿ.ಎ.ಇಂದೂಧರ ಬೇಸೂರು, ದಿನೇಶ್ ಬರದವಳ್ಳಿ, ವ.ಶಂ.ರಾಮಚಂದ್ರ ಭಟ್, ಅಮೃತೇಶ್ವರ, ರವಿಕುಮಾರ್ ಎಚ್.ಎಂ., ಸೋಮಶೇಖರ್ ಲ್ಯಾವಿಗೆರೆ ಇನ್ನಿತರರು ಇದ್ದರು.
೧೮ಕೆ.ಎಸ್.ಎ.ಜಿ.೧