ಚಂಗಡಿಹಳ್ಳಿ ಮಠದ ಅಧಿಪತ್ಯಕ್ಕಾಗಿ ಹಗ್ಗಜಗ್ಗಾಟ

KannadaprabhaNewsNetwork |  
Published : Apr 12, 2026, 01:45 AM IST
11ಎಚ್ಎಸ್ಎನ್3ಎ : ಸಂತೋಷ್.ಚಂಗಡಿಹಳ್ಳಿ. ಮಠದ ಭಕ್ತ | Kannada Prabha

ಸಾರಾಂಶ

೧೯ನೇ ಶತಮಾನದ ಆರಂಭದಿಂದ ಮಠ ತನ್ನ ಗತವೈಭವವನ್ನು ಕಳೆದು ಕೊಳ್ಳಲಾರಂಭಿಸಿದ್ದು ಮಠದ ಹೆಸರಿನಲ್ಲಿದ್ದ ಸಾಕಷ್ಟು ಜಮೀನನ್ನು ಅನ್ಯರು ಒತ್ತುವರಿ ಮಾಡಿಕೊಳ್ಳಲಾರಂಭಿಸಿದ್ದರು. ಇದರಿಂದಾಗಿ ೧೯೬೦ ದಶಕದಲ್ಲಿ ರಾಜ್ಯದಲ್ಲೆ ಪ್ರಬಲ ಮಠ ಎಂದು ಕರೆಸಿಕೊಳ್ಳುತ್ತಿದ್ದ ಚಿತ್ರದುರ್ಗದ ಮುರುಘ ಮಠದ ಅಂದಿನ ಸ್ವಾಮೀಜಿಗೆ ಪತ್ರವ್ಯವಹಾರ ನಡೆಸಿದ್ದ ಅಂದಿನ ಚಂಗಡಿಹಳ್ಳಿ ಮಠದ ಚಂದ್ರಶೇಖರ್ ಸ್ವಾಮೀಜಿ ಮಠವನ್ನು ರಕ್ಷಿಸಿ ನಿರ್ವಹಿಸುವಂತೆ ವಿನಂತಿಸಿದ್ದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಚಂಗಡಿಹಳ್ಳಿ ಮಠದ ಅಧಿಪತ್ಯಕ್ಕಾಗಿ ಗ್ರಾಮಸ್ಥರು ಹಾಗೂ ಚಿತ್ರದುರ್ಗ ಮುರುಘಾಮಠದ ಆಡಳಿತಾಧಿಕಾರಿಗಳ ನಡುವಿನ ಕಿತ್ತಾಟ ತೀವ್ರ ಸ್ವರೂಪ ಪಡೆದಿದೆ.ಸುಮಾರು ಎಂಟು ಶತಮಾನಗಳ ಇತಿಹಾಸ ಹೊಂದಿರುವ ಚಂಗಡಿಹಳ್ಳಿ ಗ್ರಾಮದಲ್ಲಿರುವ ವಿರಕ್ತ ಸ್ವತಂತ್ರ ಮಠದ ಒಡೆತನಕ್ಕಾಗಿ ಗ್ರಾಮಸ್ಥರ ಒಂದು ತಂಡ ಹಾಗೂ ಮುರುಘಾಮಠದ ಆಡಳಿತಾಧಿಕಾರಿಗಳು ಅಕ್ಷರಶಃ ಬಡಿದಾಡಿಕೊಳ್ಳುವ ಹಂತಕ್ಕೆ ತಲುಪಿದೆ.ಸುಮಾರು ಎಂಟು ನೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಾಗೃತಿಗಾಗಿ ಅಂದಿನ ಶ್ರೀಮಂತ ಕುಟುಂಬಗಳು ಮಠ ನಿರ್ಮಾಣಕ್ಕಾಗಿ ನೂರು ಎಕರೆಗೂ ಅಧಿಕ ಭೂಮಿಯನ್ನು ದಾನ ಮಾಡಿ ಮರ ಹಾಗೂ ಕಲ್ಲಿನಿಂದ ಮಠ ನಿರ್ಮಿಸಿ ಭಕ್ತರು ಕಾಣಿಕೆಯಾಗಿ ನೀಡಿದ್ದ ಜಮೀನಿನಲ್ಲಿ ಬೆಳೆ ಬೆಳೆಯುವ ಮೂಲಕ ಮಠದ ನಿರ್ವಹಣೆ ನಡೆಸಲಾಗುತಿತ್ತು. ಆದರೆ, ೧೯ನೇ ಶತಮಾನದ ಆರಂಭದಿಂದ ಮಠ ತನ್ನ ಗತವೈಭವವನ್ನು ಕಳೆದು ಕೊಳ್ಳಲಾರಂಭಿಸಿದ್ದು ಮಠದ ಹೆಸರಿನಲ್ಲಿದ್ದ ಸಾಕಷ್ಟು ಜಮೀನನ್ನು ಅನ್ಯರು ಒತ್ತುವರಿ ಮಾಡಿಕೊಳ್ಳಲಾರಂಭಿಸಿದ್ದರು. ಇದರಿಂದಾಗಿ ೧೯೬೦ ದಶಕದಲ್ಲಿ ರಾಜ್ಯದಲ್ಲೆ ಪ್ರಬಲ ಮಠ ಎಂದು ಕರೆಸಿಕೊಳ್ಳುತ್ತಿದ್ದ ಚಿತ್ರದುರ್ಗದ ಮುರುಘ ಮಠದ ಅಂದಿನ ಸ್ವಾಮೀಜಿಗೆ ಪತ್ರವ್ಯವಹಾರ ನಡೆಸಿದ್ದ ಅಂದಿನ ಚಂಗಡಿಹಳ್ಳಿ ಮಠದ ಚಂದ್ರಶೇಖರ್ ಸ್ವಾಮೀಜಿ ಮಠವನ್ನು ರಕ್ಷಿಸಿ ನಿರ್ವಹಿಸುವಂತೆ ವಿನಂತಿಸಿದ್ದರು.ಇವರ ಮನವಿ ಮೇರೆಗೆ ಅಂದಿನಿಂದ ಚಿತ್ರದುರ್ಗದ ಮುರುಘಾ ಮಠದಿಂದ ಇಲ್ಲಿಗೆ ಓರ್ವ ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ಒತ್ತುವರಿಯಾಗಿದ್ದ ಭೂಮಿಯನ್ನು ಕಾನೂನು ಮೂಲಕ ಬಿಡಿಸಿದ್ದರು. ಅಂದಿನಿಂದ ಮರುಘಮಠವೇ ಇಲ್ಲಿಗೆ ಸ್ವಾಮೀಜಿಗಳನ್ನು ನೇಮಿಸುತಿತ್ತು. ಆದರೆ, ೨೧ನೇ ಶತಮಾನದ ಆರಂಭದ ವೇಳೆಗೆ ಸ್ವಾಮೀಜಿಗಳ ನೇಮಕವೇ ರದ್ದಾಗಿದ್ದು ಕೊಡಗಿನ ಸೋಮವಾರಪೇಟೆಯ ಬೆಳೂರು ಮಠದಲ್ಲಿ ಇರುವ ಆಡಳಿತಾಧಿಕಾರಿಗಳ ಮೂಲಕ ಇಲ್ಲಿನ ಮಠವನ್ನು ನಿರ್ವಹಣೆ ಮಾಡಲಾರಂಭಿಸಿದ್ದರು. ಅಂದಿನಿಂದ ಈ ಮಠದ ಆಸ್ತಿಯನ್ನು ಅನ್ಯರಿಗೆ ಗುತ್ತಿಗೆ ನೀಡುವ ಪ್ರವೃತ್ತಿ ಆರಂಭವಾಗಿದ್ದು ಗ್ರಾಮದ ಬಲಾಢ್ಯರು ಮರುಘಮಠದ ಆಡಳಿತಾಧಿಕಾರಿಗಳ ಕೃಪೆ ಸಂಪಾದಿಸಿ ತಮಗಿಷ್ಟ ಬಂದಷ್ಟು ಜಮೀನನ್ನು ಗುತ್ತಿಗೆಪಡೆಯುತ್ತಿರುವುದರಿಂದ ಇಂದು ಮಠಕ್ಕೆ ಕೇವಲ ಎರಡಂಕಿಯ ಜಮೀನು ಮಾತ್ರ ಉಳಿಯುವಂತಾಗಿದೆ. ಆಡಳಿತಾಧಿಕಾರಿಗಳ ಆಟಟೋಪಕ್ಕೆ ಸಿಲುಕಿರುವ ಮಠ ಇಂದು ದುಸ್ಥಿತಿಗೆ ತಲುಪಿದ್ದು ಪುರಾತನಕಾಲದ ಮಠದ ಕಟ್ಟಡ ಅಕ್ಷರ ಸಹ ನಾಶದ ಅಂಚಿಗೆ ತಲುಪಿದ್ದರೆ ಮಠದ ಆವರಣದಲ್ಲೇ ಕಾಫಿತೋಟದ ಕೆಲಸಕ್ಕಾಗಿ ಬರುವ ಕಾರ್ಮಿಕರು ಮಾಂಸಮಡ್ಡಿಗಳನ್ನು ಬೇಯಿಸಿ ತಿನ್ನುವುದರಿಂದ ಮಠದ ಪಾವಿತ್ರ್ಯತೆ ಮಣ್ಣು ಪಾಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಪೂರ್ವಿಕರು ಸಂಸ್ಕಾರ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶದಿಂದ ಭೂಮಿ ದಾನ ನೀಡಿ ಮಠ ಕಟ್ಟಿ, ಸ್ವಾಮೀಜಿಗಳ ನೇಮಿಸುವ ಮೂಲಕ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತಿತ್ತು. ಆದರೆ, ಇಂದು ಸ್ವಾಮೀಜಿಗಳಿಲ್ಲದ ಮಠ ಹಾಳುಸುರಿಯುತ್ತಿದ್ದು ಪೂಜೆಪುನಸ್ಕಾರಗಳು ನಿಂತೇ ಹೋಗಿವೆ. ದರ್ಪದ ಮೂಲಕ ಭಕ್ತರಿಗೆ ಮಠಕ್ಕೆ ಪ್ರವೇಶವಿಲ್ಲದಂತೆ ಮಾಡಲಾಗಿದೆ. ಭಕ್ತರಿಗಿಲ್ಲದ ಮಠ ಯಾವ ಪುರುಷಾರ್ಥಕ್ಕೆ. ಆದ್ದರಿಂದ, ಮಠವನ್ನು ಗ್ರಾಮಸ್ಥರ ಸುಪರ್ದಿಗೆ ನೀಡಬೇಕು ಇಲ್ಲಿ ಹಿಂದಿನಂತೆ ಧಾರ್ಮಿಕ ಕಾರ್ಯಗಳು ನಡೆಸುವ ಮೂಲಕ ಮಠವನ್ನು ಹಿಂದಿನ ಸ್ಥಿತಿಗೆ ಕೊಂಡೊಯ್ಯಲಾಗುವುದು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂಬುದು ಗ್ರಾಮಸ್ಥರ ವಾದ. ನರಿಕೂಗು ಗಿರಿಮುಟ್ಟದಾಗಿದೆ:

ಕಳೆದ ಒಂದು ದಶಕದಿಂದ ಗ್ರಾಮಸ್ಥರು ತಾವೇ ಚಂದಾ ಹಾಕಿಕೊಂಡು ಮಠದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಠದ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಎಂದು ರಾಜ್ಯದ ಹಿರಿಯ ವೀರಶೈವ-ಲಿಂಗಾಯಿತ ಮುಖಂಡರಿಗೆ ಮನವಿ ಮಾಡಿದ್ದರೂ ಮುರುಘ ಮಠದ ಹೆಸರು ಕೇಳಿದ ತಕ್ಷಣ ಕ್ಷಮಿಸಿ ಎಂಬ ಉತ್ತರ ದೊರೆಯುತ್ತಿದೆ. ಇದರಿಂದಾಗಿ ಪ್ರಬಲ ಮಠದ ವಿರುದ್ದ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ನರಿಕೂಗು ಗಿರಿಮುಟ್ಟದಂತಾಗಿದೆ.ತೀವ್ರಮಟ್ಟದ ಪ್ರತಿರೋಧ:

ಇತ್ತೀಚೆಗೆ ಮಠದ ಸುಮಾರು ೧೨ ಎಕರೆ ಭೂಮಿಯನ್ನು ಒಂದೇ ಕುಟುಂಬದ ಮೂವರಿಗೆ ಮಠದ ನಿರ್ವಹಣೆ ಮಾಡಿದ್ದಾರೆ ಎಂಬ ಕಾರಣ ನೀಡಿ ಗುತ್ತಿಗೆ ನೀಡಲಾಗಿದೆ. ಇದರಿಂದ, ಕೆರಳಿದ ಗ್ರಾಮಸ್ಥರು ಅಕ್ರಮವಾಗಿ ಮಠದ ಆಸ್ತಿಯನ್ನು ಕಂಡಕಂಡವರಿಗೆ ನೀಡುತ್ತಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದು ಪ್ರಸಕ್ತ ವರ್ಷ ಆಡಳಿತಾಧಿಕಾರಿಗಳಿಗೆ ಕಾಫಿ ಕೊಯ್ಲು ನಡೆಸಲು ಅವಕಾಶ ನೀಡಿರಲಿಲ್ಲ. ಆದರೆ, ಮುರುಘಾ ಮಠದ ಆಡಳಿತಾಧಿಕಾರಿಗಳು ನೂರಾರು ಪೊಲೀಸ್ ಹಾಗೂ ತಮ್ಮ ಖಾಸಗಿ ಬೆಂಬಲಿಗರ ಪಡೆಯನ್ನು ಮಠದ ಸುತ್ತ ನಿಯೋಜಿಸುವ ಮೂಲಕ ಮೂರೇ ದಿನದಲ್ಲಿ ಕಾಫಿ ಕೊಯ್ಲು ನಡೆಸಿ ಕೊಂಡೊಯ್ಯದಿದ್ದಾರೆ. ಇತ್ತೀಚೆಗೆ ಗ್ರಾಮಸ್ಥರ ವಿರೋಧದ ನಡುವೆಯೂ ಮಠದ ಜಮೀನಿನಲ್ಲಿರುವ ನೂರಾರು ಮರಗಳನ್ನು ಕಡಿದು ಸಾಗಿಸಲಾಗಿದೆ. ಗ್ರಾಮಸ್ಥರು ನೀಡಿದ ದೂರಿನನ್ವಯ ಯಸಳೂರು ಅರಣ್ಯ ಇಲಾಖೆ ಅಕ್ರಮ ಮರ ಕಡಿತದ ವಿರುದ್ದ ಮಠದ ಆಡಳಿತಾಧಿಕಾರಿಗಳ ವಿರುದ್ದ ದೂರು ದಾಖಲಿಸಿದ್ದರು. ಇದರ ನಂತರವು ಮಠದ ಜಮೀನಿನಲ್ಲಿರುವ ಮರಗಳನ್ನು ಕಡಿದು ಸಾಗಿಸುವ ಪ್ರಯತ್ನ ನಡೆಸಲಾಗಿದೆ ಆದರೆ, ಇದಕ್ಕೆ ತೀವ್ರಮಟ್ಟದ ವಿರೋಧ ವ್ಯಕ್ತಿಪಡಿಸಿರುವ ಗ್ರಾಮಸ್ಥರು ಮಠದಲ್ಲಿರುವ ಪ್ರತಿಯೊಂದು ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡುವುದನ್ನೆ ಕಾಯಕವನ್ನಾಗಿ ಮಾಡಿಕೊಂಡಿರುವ ಆಡಳಿತಾಧಿಕಾರಿಗಳು ಮಠವನ್ನು ಸಂಪೂರ್ಣ ನಾಶದ ಅಂಚಿಗೆ ತಲುಪಿಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಆಡಳಿತಾಧಿಕಾರಿಗಳ ವಾದವೇ ಬೇರೆ:

ಕೊಡಗಿನ ಬೆಳೂರು ಮಠದಲ್ಲಿರುವ ಆಡಳಿತಾಧಿಕಾರಿಗಳ ವಾದವೇ ಬೇರೆಯಾಗಿದ್ದು ಸಾಕಷ್ಟು ವರ್ಷಗಳಿಂದ ಚಂಗಡಿಹಳ್ಳಿಮಠ ಮುರುಘಮಠದ ಅಧೀನಮಠವಾಗಿದ್ದು ಸಾಕಷ್ಟು ವರ್ಷದಿಂದ ಆಡಳಿತಾಧಿಕಾರಿಗಳೇ ಇಲ್ಲಿನ ಮಠವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಓರ್ವ ಪೂಜಾರಿ ಮೂಲಕ ಒಂದೊತ್ತಿನ ಪೂಜೆ ನಡೆಯುತ್ತಿದೆ. ಮಠದ ಗೋದಾಮು ಸೇರಿದಂತೆ ಹೊಸ ಕಟ್ಟಡವನ್ನು ನಿರ್ಮಿಸುವ ಮೂಲಕ ಕಾಫಿ ತೋಟವನ್ನು ನಿರ್ವಹಿಸುತ್ತಿದ್ದೇವೆ. ಮರುಘಮಠದಿಂದ ಸ್ವಾಮಿಜೀಗಳನ್ನು ನೇಮಿಸಿದರೆ ಗ್ರಾಮಸ್ಥರು ಗಲಾಟೆ ಮಾಡಿ ವಾಪಸ್‌ ಕಳುಹಿಸುತ್ತಾರೆ. ಇದರಿಂದ ಸ್ವಾಮಿಜೀಗಳ ನೇಮಕವಾಗಿಲ್ಲ. ಇತ್ತೀಚೆಗೆ ಯಾರಿಗೂ ಭೂಮಿಯನ್ನು ಗುತ್ತಿಗೆ ನೀಡಿಲ್ಲ ಮಠ ಹಾಳಾಗುತ್ತಿದೆ ಎಂಬ ಗ್ರಾಮಸ್ಥರ ಹೇಳಿಕೆಯಲ್ಲಿ ಹುರುಳಿಲ್ಲ ಎನ್ನುತ್ತಿದ್ದಾರೆ.ಗ್ರಾಮಸ್ಥರಲ್ಲೇ ಒಡಕು:

ಮಠದ ಸಾಕಷ್ಟು ಜಮೀನನ್ನು ಗ್ರಾಮದ ಹಲವರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಬೆಳೆದಿದ್ದರೆ ಮತ್ತಷ್ಟು ಜನರು ಗುತ್ತಿಗೆ ಪಡೆದಿದ್ದಾರೆ. ಇದರಿಂದಾಗಿ ಗ್ರಾಮಸ್ಥರ ಒಡೆತನಕ್ಕೆ ಮಠ ಬಂದರೆ ಜಮೀನು ತೆರವು ಮಾಡಬೇಕಾಗುತ್ತದೆ ಎಂಬ ಭಯದಿಂದ ಮಠ ಉಳಿಸಿ ಎಂಬ ಗ್ರಾಮಸ್ಥರ ಹೋರಾಟದಲ್ಲಿ ಕೈ ಜೋಡಿಸುತ್ತಿಲ್ಲ ಬದಲಾಗಿ ಪರೋಕ್ಷವಾಗಿ ಆಡಳಿತಾಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

------*ಹೇಳಿಕೆ

ಮಠ ಹಾಳಾಗುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಉತ್ತಮವಾಗಿ ಕಾಫಿ ತೋಟ ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲದೆ ಮಠದ ಪುರತಾನ ಕಟ್ಟಡವನ್ನು ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ. ಮೋಕ್ಷಪತಿ ಸ್ವಾಮೀಜಿ, ಚಂಗಡಿಹಳ್ಳಿಮಠದ ಉಸ್ತುವಾರಿ *ಹೇಳಿಕೆ - ಮಠವೆಂದರೆ ಧಾರ್ಮಿಕ ಘಮಲು ಇರುವ ಸ್ಥಳ ಇಲ್ಲಿ ಪೂಜೆ, ಪುನಸ್ಕಾರ,ಹೋಮ ಹವನ ನಡೆಯಬೇಕು, ಇಲ್ಲಿ ಮಠದ ಹೆಸರಿನಲ್ಲಿ ಕಾಫಿ ತೋಟವನ್ನು ಮಾತ್ರ ನಿರ್ವಹಿಸಲಾಗುತ್ತಿದೆ. ಆದ್ದರಿಂದ ಮಠವನ್ನು ಭಕ್ತಾದಿಗಳಿಗೆ ನೀಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೆವೆ. ಸಂತೋಷ್, ಚಂಗಡಿಹಳ್ಳಿ, ಮಠದ ಭಕ್ತ (11ಎಚ್ಎಸ್ಎನ್3ಎ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ: ಮಹಾತ್ಮ ಜ್ಯೋತಿಬಾ ಫುಲೆ ಜನ್ಮ ದಿನಾಚರಣೆ
ರಾಮಾನುಜಾಚಾರ್ಯರ ಜಯಂತಿ: ಏ.13 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭ