ನಕಲಿ ಜಾತಿಪತ್ರಕ್ಕೆ ಕಡಿವಾಣ ಹಾಕದಿದ್ದರೆ ಹೋರಾಟ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಎಸ್ಸಿ /ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕಳೆದ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಎಸ್ಸಿ,ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ 2024ರ ವಾಲ್ಮೀಕಿ ಜಾತ್ರಾ ಮಹೋತ್ಸವದ ನಿಮಿತ್ತ ಪಟ್ಟಣದ ನೂತನ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಎಸ್ಸಿ /ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗಿದೆ. ಎಸ್ಟಿ ಮೀಸಲು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿರುವ 15 ಜನ ಶಾಸಕರು, ಇಬ್ಬರು ಸಂಸದರು, ರಾಜ್ಯ ಸರ್ಕಾರದಲ್ಲಿ ಮೂವರು ಪ್ರಭಾವಿ ಸಚಿವರು ಹಾಗೂ ವಿರೋಧಪಕ್ಷದಲ್ಲಿ ಪ್ರಭಾವಿ ನಾಯಕರಿದ್ದರೂ, ಈ ಬಗ್ಗೆ ಧ್ವನಿಯತ್ತದೆ ಇರುವುದು ಬೇಸರ ತರಿಸಿದೆ. ರಾಜ್ಯ ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ವಾಲ್ಮೀಕಿ ನಾಯಕ ಸಮುದಾಯ ರಾಜ್ಯದ 4ನೇ ಅತಿ ದೊಡ್ಡ ಸಮುದಾಯವಾಗಿದ್ದು, ಅಸಂಘಟಿತ ಸಮುದಾಯವನ್ನು ಧರ್ಮದ ತಳಹದಿಯ ಮೇಲೆ ಪುಣ್ಯಾ ನಂದಪುರಿ ಸ್ವಾಮೀಜಿ ಸಂಘಟನೆ ಮಾಡಿ ಒಂದುಗೂಡಿಸಲು ಶ್ರಮಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂದು ಪಾದ ಯಾತ್ರೆ ಮತ್ತು ಧರಣಿ ಸತ್ಯಾಗ್ರಹ ಕುಳಿತಿದ್ದರಿಂದ ಹಿಂದಿನ ಸರ್ಕಾರ ಎಚ್ಚೆತ್ತು ನಮ್ಮ ಮನವಿಗೆ ಸ್ಪಂದಿಸಿ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಮುಂದಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು. ಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷವೂ ಒಂದು ಅಜೆಂಡಾವನ್ನು ಇಟ್ಟುಕೊಂಡು ಬರಲಾಗಿದೆ. ಅದರಂತೆಯೇ, ಈ ಬಾರಿಯೂ ಒಂದು ಅಜೆಂಡಾವನ್ನು ಇಟ್ಟುಕೊಳ್ಳಲಾಗಿದೆ. ಈ ವರ್ಷ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಆಯ್ಕೆಯಾಗಿದ್ದಾರೆ. ಜಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೇರಿದಂತೆ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಸಚಿವರು, ಶಾಸಕರು, ಸಂಸದರು, ಚಿಂತಕರು, ಸಾಹಿತಿಗಳು, ವಿವಿಧ ಸಂಘಟನೆಗಳ ಹೋರಾಟಗಾರರು, ರಾಜಕೀಯ ಮುಖಂಡರು ಹಾಗೂ ಸಮುದಾಯದ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಸಭೆಯಲ್ಲಿ ತಾಲೂಕು ನಾಯಕ ಸಮಾಜದ ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ವೆಂಗಳಾಪುರ ರಂಗನಾಥ್, ಖಜಾಂಚಿ ಜಯಣ್ಣ, ನೌಕರರ ಸಂಘದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ತುಂಬಿನಕೆರೆ ಬಸವರಾಜ್, ಗೌಡ್ರು ತಿಪ್ಪೇಸ್ವಾಮಿ, ನಾಗರಾಜ್ ಮತ್ತು ಶರತ್ ಸೇರಿದಂತೆ ಹಲವಾರು ಮುಖಂಡರಿದ್ದರು.

Share this article