ಸಚಿವ ರಾಜಣ್ಣ ಶ್ರೀಗಳ ಕ್ಷಮೆಯಾಚಿಸದಿದ್ದರೆ ಹೋರಾಟ

KannadaprabhaNewsNetwork | Published : Jun 30, 2024 12:48 AM

ಸಾರಾಂಶ

ರಾಮನಗರ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಸಹಕಾರ ಸಚಿವ ಕೆ.ರಾಜಣ್ಣ ಕೂಡಲೇ ಕ್ಷಮೆಯಾಚನೆ ಮಾಡದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘ ರಾಮನಗರ ತಾಲೂಕು ಉಪಾಧ್ಯಕ್ಷ ಅಪ್ಪಾಜಣ್ಣ (ರೇವಲಿಂಗಯ್ಯ) ಎಚ್ಚರಿಸಿದರು.

ರಾಮನಗರ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಸಹಕಾರ ಸಚಿವ ಕೆ.ರಾಜಣ್ಣ ಕೂಡಲೇ ಕ್ಷಮೆಯಾಚನೆ ಮಾಡದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘ ರಾಮನಗರ ತಾಲೂಕು ಉಪಾಧ್ಯಕ್ಷ ಅಪ್ಪಾಜಣ್ಣ (ರೇವಲಿಂಗಯ್ಯ) ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ರಾಜಣ್ಣನವರು ಒಕ್ಕಲಿಗ ನಾಯಕರ ಕುರಿತು ಯದ್ವಾತದ್ವಾ ಮಾತನಾಡುವುದನ್ನು ಬಿಡಬೇಕು. ಅಧಿಕಾರದ ಅಹಂನಿಂದ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ತಪ್ಪನ್ನು ತಿದ್ದುಕೊಂಡು ಶ್ರೀಗಳಲ್ಲಿ ಕ್ಷಮೆಯಾಚಿಸಬೇಕು ಎಂದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಒಂದು ಸಮುದಾಯ ಮಾತ್ರವಲ್ಲದೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವವರು. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವಂತೆ ಹೇಳಿರುವುದು ಶ್ರೀಗಳ ಮನದಾಳದ ಅನಿಸಿಕೆ ಇರಬಹುದು. ಭಕ್ತರ ಮನಸ್ಥಿತಿಗೆ ತಕ್ಕಂತೆ ಶ್ರೀಗಳು ಆಶೀರ್ವಾದ ಮಾಡುತ್ತಾರೆ. ಆ ರೀತಿ ಡಿ.ಕೆ.ಶಿವಕುಮಾರ್ ಅವರ ಮನಸ್ಥಿತಿಯನ್ನು ಅರಿತಿದ್ದ ಶ್ರೀಗಳು ಮುಖ್ಯಮಂತ್ರಿಯಾಗಲು ಅವಕಾಶ ನೀಡುವಂತೆ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಶ್ರೀಗಳ ಮಾತನ್ನು ತಿರುಚಿ ಕೆಲ ರಾಜಕಾರಣಿಗಳು ಅವಹೇಳನಕಾರಿ ಮಾತನಾಡುವುದು ಸರಿಯಲ್ಲ.

ನಾನು ಖಾವಿ ತೊಡುತ್ತೇನೆ. ಆಗ ಶ್ರೀಗಳು ಪೀಠ ಬಿಟ್ಟು ಕೊಡುತ್ತಾರಾ ಎಂದು ಸಹಕಾರ ಸಚಿವ ಕೆ.ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ಶ್ರೀಗಳ ಯೋಗ್ಯತೆ ಏನು, ಸಾಮಾನ್ಯ ಜನರ ಯೋಗ್ಯತೆ ಏನೆಂಬುದರ ಅರಿವು ಸಚಿವರಿಗೆ ಇದ್ದಂತಿಲ್ಲ. ಸರ್ವವನ್ನು ತ್ಯಾಗ ಮಾಡಿ ಏಕಚಿತ್ತ ಮನಸ್ಸಿನಿಂದ ಸ್ವಾಮೀಜಿ ಆಗುತ್ತಾರೆ. ಚಂಚಲ ಮನಸ್ಸಿರುವ ರಾಜಕಾರಣಿಗಳಿಗೆ ಸ್ವಾಮೀಜಿಗಳಾಗಲು ಸಾಧ್ಯವಿಲ್ಲ. ಬೇಕಾದರೆ ಎಲ್ಲರೂ ರಾಜಕಾರಣಿ ಆಗಬಹುದು. ಆದರೆ, ಸ್ವಾಮೀಜಿ ಆಗಲು ಸಾಧ್ಯವಿಲ್ಲ ಎಂದು ಸಚಿವ ರಾಜಣ್ಣರವರ ಹೇಳಿಕೆಗೆ ಅಪ್ಪಾಜಣ್ಣ ತಿರುಗೇಟು ನೀಡಿದರು.

ಸಂಘದ ನಿರ್ದೇಶಕ ಶಿವಸ್ವಾಮಿ ಮಾತನಾಡಿ, ಸಚಿವ ಕೆ.ರಾಜಣ್ಣ ಅವರಿಗೆ ತಲೆ ಕೆಟ್ಟಿದೆ. ಸಚಿವ ಸ್ಥಾನ ಬಿಟ್ಟು ಸ್ವಾಮೀಜಿ ಆಗುವುದಾದರೆ ಬರಲಿ, ನಾವೇ ಒಂದು ಎಕರೆ ಜಮೀನು ಕೊಡಿಸಿ ಮಠ ಕಟ್ಟಿ ಕೊಡುತ್ತೇವೆ. ಒಕ್ಕಲಿಗರನ್ನು ಅವಹೇಳನ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಯ್ಯ, ಕಾರ್ಯದರ್ಶಿ ಎಂ.ರೇವಣ್ಣ, ನಿರ್ದೇಶಕ ರಾದ ಸಿ.ಶಿವಸ್ವಾಮಿ, ಪಿ.ಜಯರಾಮು, ಹನುಮೇಶ್, ಗಂಗರಾಜು, ಕೆ.ಭದ್ರಯ್ಯ ಇತರರಿದ್ದರು.

29ಕೆಆರ್ ಎಂಎನ್ 3.ಜೆಪಿಜಿ

ಒಕ್ಕಲಿಗರ ಸಂಘ ರಾಮನಗರ ತಾಲೂಕು ಉಪಾಧ್ಯಕ್ಷ ಅಪ್ಪಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article