ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಹೋರಾಟ

KannadaprabhaNewsNetwork |  
Published : May 05, 2024, 02:03 AM IST
ಮುಂಡರಗಿಯಲ್ಲಿ ಜರುಗಿದ ಹಾವೇರಿ-ಗದಗ ಲೋಕಸಭ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬೃಹತ್ ಸಮಾವೇಶವನ್ನು ಬಿಜೆಪಿ ನಾಯಕರು ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಈ ಭಾಗಕ್ಕೆ ನೀರು ಕೊಡದಿದ್ದರೆ ದೊಡ್ಡ ಹೋರಾಟ ಮಾಡಲಾಗುವುದು. ಕೇವಲ ಮುಂಡರಗಿ ಅಷ್ಟೇ ಅಲ್ಲ, ಗದಗ, ರೋಣ, ಕೊಪ್ಪಳ ಭಾಗದವರೆಗೂ ಭೂಮಿ ತಾಯಿ ಹಸಿರು ಸೀರೆ ಉಟ್ಟು ಕಂಗೊಳಿಸಬೇಕು

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌

ಅವರು ಮುಂಡರಗಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಂಡರಗಿ ತಾಲೂಕಿನ ಮಣ್ಣಿಗೆ ತುಂಗಭದ್ರಾ ನೀರು ಹರಿಸಿದರೆ ಭೂಮಿ ತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿ ಮಾಡಿದ್ದು ನಾನು. ಒಂದು ಸಾವಿರ ಕೋಟಿ ಖರ್ಚು ಮಾಡಿ, ನಾಲ್ಕು ಹಳ್ಳಿಗಳನ್ನು ಸ್ಥಳಾಂತರ ಮಾಡಿ ಕಾಲುವೆ ಮಾಡಿದ್ದೇವೆ. ಹನಿ ನೀರಾವರಿ ಮಾಡುವ ಗುರಿ‌ ಇದೆ. ಆದರೆ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯೋಜನೆ ಸಂಪೂರ್ಣ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರ ಈ ಭಾಗಕ್ಕೆ ನೀರು ಕೊಡದಿದ್ದರೆ ದೊಡ್ಡ ಹೋರಾಟ ಮಾಡಲಾಗುವುದು. ಕೇವಲ ಮುಂಡರಗಿ ಅಷ್ಟೇ ಅಲ್ಲ, ಗದಗ, ರೋಣ, ಕೊಪ್ಪಳ ಭಾಗದವರೆಗೂ ಭೂಮಿ ತಾಯಿ ಹಸಿರು ಸೀರೆ ಉಟ್ಟು ಕಂಗೊಳಿಸಬೇಕು. ಜಾಲವಾಡಗಿ ಏತ ನೀರಾವರಿ ಈ ಭಾಗಕ್ಕೆ ತುರ್ತಾಗಿ ಬೇಕಾಗಿದೆ. ಇವತ್ತಿನ ಸರ್ಕಾರ ಅದನ್ನು ನಿಲ್ಲಿಸಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ರೈತರ ವಿಚಾರದಲ್ಲಿ ರಾಜಕಾರಣ ಮಾಡಿದ್ದಾರೆ.‌ ರೈತರಿಗೆ ನಾಲ್ಕು ಸಾವಿರ ಕೊಟ್ಟಿದ್ದರೆ ನಿಮ್ಮ ಗಂಟೇನು ಹೋಗುತ್ತಿತ್ತು. ರೈತ ವಿದ್ಯಾನಿಧಿ ಯೋಜನೆ ಮಾಡಿದ್ದೇವು ಅದನ್ನು ನಿಲ್ಲಿಸಿದರು. ರೈತ ಶಕ್ತಿ ನಿಲ್ಲಿಸಿದರು. ಯಶಸ್ವಿನಿ ನಿಲ್ಲಿಸಿದರು. ಬರ ಬಂದು ಹತ್ತು ತಿಂಗಳಾಯಿತು ರಾಜ್ಯ ಸರ್ಕಾರದ ಬೊಕ್ಕಸದಿಂದ ನಯಾ ಪೈಸೆ ಕೊಟ್ಟಿಲ್ಲ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ನಾವು ರೈತರನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇವು, ನೀವು ರೈತರನ್ನು ಕಾಲ ಕಸದಂತೆ ನೋಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಮಾಡಿ ಎಲ್ಲರನ್ನೂ ಉದ್ಧಾರ ಮಾಡಿದ್ದೇವೆ ಎಂದು ಹೇಳುತ್ತಾರೆ.ಅದನ್ನು ನೋಡಲು ಕಾಂಗ್ರೆಸ್ ‌ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿದ್ದಾರೆ.ಖಜಾನೆ ಲೂಟಿ ಮಾಡುತ್ತಿದ್ದಾರೆ.‌ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗ ಬರುತ್ತಿರುವುದು ಮೋದಿ ಕೊಡುತ್ತಿರುವ ಅಕ್ಕಿ,ಗೃಹಲಕ್ಷ್ಮೀಗೆ ಹೆಣ್ಣು ಮಕ್ಕಳು ಅಲೆದಾಡಿ ಅವರ ಚಪ್ಪಲಿ ಸವೆಯುತ್ತಿವೆ.ಯುವ ನಿಧಿ ಯಾರಿಗೂ ತಲುಪಿಲ್ಲ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಬರುವ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ ಎಂದರು.

ರಾಹುಲ್ ಗಾಂಧಿಗೆ ರಾತ್ರಿ ಏನು ಕನಸು ಬೀಳುತ್ತದೆ.ಅದನ್ನು ಬೆಳಗ್ಗೆ ಹೇಳುತ್ತಾರೆ. ಎಲ್ಲರ ಆಸ್ತಿ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತಿದೆ.ಆಸ್ತಿ ಹಂಚುವುದಿದ್ದರೆ ಮೊದಲು ನಿಮ್ಮ ಆಸ್ತಿ ಹಂಚಿ ಎಂದು ಸವಾಲು ಹಾಕಿದರು. ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ನೀಡಲು ಸರ್ಕಾರಕ್ಕೆ ಶೇ.55% ರಷ್ಟು ತೆರಿಗೆ ಕಟ್ಟಬೇಕಂತೆ,ಇಂತ ಹುಚ್ಚಾಟದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದರು.

ಕೋವಿಡ್ ಸಂದರ್ಭದಲ್ಲಿ ಎಲ್ಲರ ಜೀವ ಉಳಿಸಿರುವ ಮೋದಿ ಋಣ ತೀರಿಸಬೇಕು. ಅನ್ನಕೊಟ್ಟು,ನೀರು ಕೊಟ್ಟು,ಜೀವ ಉಳಿಸಿದ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ತಮ್ಮ ಕಮಲದ ಗುರುತಿಗೆ ಮತ ಹಾಕುವ ಮೂಲಕ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವಂತೆ ಮನವಿ ಮಾಡಿದರು.

ಸಮಾವೇಶದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕಳಕಪ್ಪ ಬಂಡಿ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಚಂದ್ರು ಲಮಾಣಿ ಶಿವಕುಮಾರಗೌಡ ಪಾಟೀಲ ಮಾತನಾಡಿದರು.

ಹೇಮಗಿರೀಶ ಹಾವಿನಾಳ ಅಧ್ಯಕ್ಷತೆ ವಹಿಸಿದ್ದರು. ಕರಬಸಪ್ಪ ಹಂಚಿನಾಳ, ಲಿಂಗರಾಜಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ಎಸ್.ವಿ.ಪಾಟೀಲ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಆನಂದಗೌಡ ಪಾಟೀಲ, ಭೀಮಸಿಂಗ್ ರಾಠೋಡ, ಶಿವಪ್ಪ ಚಿಕ್ಕಣ್ಣವರ, ರಜನೀಕಾಂತ ದೇಸಾಯಿ, ಅಶೋಕ ಶಿದ್ಲಿಂಗ, ಇಲ್ಲೂರ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ಪವಿತ್ರಾ ಕಲ್ಲಕುಟಗರ್, ಕವಿತಾ ಉಳ್ಳಾಗಡ್ಡಿ, ಜ್ಯೋತಿ ಹಾನಗಲ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.

3ಎಂಡಿಜಿ2

ಮುಂಡರಗಿಯಲ್ಲಿ ಜರುಗಿದ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬೃಹತ್ ಸಮಾವೇಶವನ್ನು ಬಿಜೆಪಿ ನಾಯಕರು ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ