ಪಂಚಮಸಾಲಿಗೆ ಸಮಾಜಕ್ಕೆ ಮೀಸಲಾತಿಗೆ ಹೋರಾಟ: ವಚನಾನಂದ ಶ್ರೀ

KannadaprabhaNewsNetwork | Published : Jul 15, 2024 1:46 AM

ಸಾರಾಂಶ

ಮೀಸಲಾತಿ ಸೌಲಭ್ಯಕ್ಕಾಗಿ ಪದೇಪದೇ ಸರ್ಕಾರವನ್ನು ಒತ್ತಾಯಿಸಲು ಬೀದಿಗಿಳಿದು ಹೋರಾಟ ಮಾಡುವ ಅಗತ್ಯ ಇಲ್ಲವೇ ಇಲ್ಲ.

ಕೊಟ್ಟೂರು: ವೀರಶೈವ ಪಂಚಮಸಾಲಿ ಸಮಾಜಕ್ಕೆ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ಒದಗಿಸಬೇಕು ಎಂದು ನ್ಯಾಯಾಲಯದ ಮೂಲಕ ಹರಿಹರ ಪೀಠ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿದೆಯೇ ಹೊರತು ಈ ಹೋರಾಟದಿಂದ ಎಂದಿಗೂ ವಿಮುಖವಾಗಿಲ್ಲ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀ ಹೇಳಿದರು.

ಪಟ್ಟಣದ ಹೊರಹೊಲಯದ ಮಹದೇವ ಇಂಟರ್‌ನ್ಯಾಷನಲ್‌ ಸ್ಕೂಲ್‌ ನಲ್ಲಿ ಕೊಟ್ಟೂರು ತಾಲೂಕು ಘಟಕ ಆಯೋಜಿಸಿದ್ದ 2024ನೇ ಸಾಲಿನ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳು, ನಿವೃತ್ತ ನೌಕರರು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಲಯ ಪಂಚಮಸಾಲಿ ಸಮಾಜಕ್ಕೆ ಒಬಿಸಿ ಮೀಸಲಾತಿ ದೊರಕಿಸಿಕೊಡುವ ಕಾರಣಕ್ಕಾಗಿ ಈ ಕುರಿತು ಕರ್ನಾಟಕ ಸರ್ಕಾರದಿಂದ ಮಾಹಿತಿ ಕೇಳಿದೆ. ರಾಜ್ಯ ಸರ್ಕಾರ ಇದಕ್ಕೆ ಪೂರಕ ಮೀಸಲಾತಿ ಕೊಡುವ ಬಗ್ಗೆ ಸೂಕ್ತ ಶಿಫಾರಸಿನ ವರದಿ ಕೊಟ್ಟ ಕೂಡಲೇ ಸಮಾಜದವರಿಗೆ ಮೀಸಲಾತಿ ಸೌಲಭ್ಯ ಒದಗುತ್ತದೆ. ಈ ಮೀಸಲಾತಿ ಸೌಲಭ್ಯಕ್ಕಾಗಿ ಪದೇಪದೇ ಸರ್ಕಾರವನ್ನು ಒತ್ತಾಯಿಸಲು ಬೀದಿಗಿಳಿದು ಹೋರಾಟ ಮಾಡುವ ಅಗತ್ಯ ಇಲ್ಲವೇ ಇಲ್ಲ. ಯಾವ ರೀತಿ ಮೀಸಲಾತಿ ಸೌಲಭ್ಯವನ್ನು ಪಡೆಯಬೇಕೆಂಬುದನ್ನು ಅರಿತು ಹರಿಹರ ಪೀಠ ಕಾನೂನಾತ್ಮಕವಾಗಿ ತೊಡಗಿಸಿಕೊಂಡಿದೆ. ಯಾವುದೇ ಕಾರಣಕ್ಕೂ ಸಮಾಜದ ಒಳಿತಿಗೆ ಕೆಡುಕು ಆಗದಂತೆ ಪ್ರತಿಹಂತದಲ್ಲೂ ಗಮನಿಸುತ್ತಾ ಸಾತ್ವಿಕ ಮತ್ತು ಕಾನೂನಾತ್ಮಕ ಹೋರಾಟ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

ಪಂಚಮಸಾಲಿ ಹರಿಹರ ಪೀಠವು ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ದಾವಣಗೆರೆಯಲ್ಲಿ ಪಿಯು ಕಾಲೇಜ್‌ ತೆರೆಯಲಾಗಿದೆ. ಇದಲ್ಲದೆ ಪ್ರತಿ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗದಂತೆ ಗಮನಿಸಿದ್ದೇವೆ ಎಂದು ಅವರು ಹೇಳಿದರು.

ಸಮಾರಂಭ ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಕೃಷಿ ಅವಲಂಬನೆಯಲ್ಲಿ ತೊಡಗಿಸಿಕೊಂಡ ಪಂಚಮಸಾಲಿ ಜನಾಂಗದವರು ತಮ್ಮ ಮಕ್ಕಳನ್ನು ಶಿಕ್ಷಣ ಕಲಿಕೆಗೆ ಅವಕಾಶ ಮಾಡಕೊಡಬೇಕು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ಗಮನ ಹರಿಸಬೇಕು ಎಂದರು.

ಸಾಧನೆಗೈದ ಮಹದೇವ ಇಂಟರ್‌ ನ್ಯಾಷಿನಲ್‌ ಸ್ಕೂಲ್‌ನ ವ್ಯವಸ್ಥಾಪಕ ಬಸಾಪುರ ಪಂಪಾಪತಿ ಸನ್ಮಾನಿತಗೊಂಡು ಮಾತನಾಡಿ, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೇವಲ ಸನ್ಮಾನ ಮಾಡಿದರಷ್ಟೇ ಸಾಲದು. ಇದರ ಜತೆಗೆ ಅವರ ವಿದ್ಯಾ ಬದುಕಿಗೆ ಎಲ್ಲ ಬಗೆಯಲ್ಲಿ ನೆರವಾಗಲೆಂದು ಸಂಚಿತ ನಿಧಿ ಸ್ಥಾಪನೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಕೊಟ್ಟೂರು ತಾಲೂಕಿನ ಸಮಾಜದವರು ಮುಂದಾಗಿರುವುದು ಮೆಚ್ಚುಗೆಯ ವಿಷಯ ಎಂದರು.

ಪಂಚಮಸಾಲಿ ಜನಾಂಗದ ರಾಜ್ಯ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿದರು. ವೇದಿಕೆಯಲ್ಲಿ ಕೂಡ್ಲಿಗಿ ತಾಲೂಕು ಅಧ್ಯಕ್ಷ ಹುಳಿಯಾಳ್‌ ರೇವಣ್ಣ, ದೇವರ ಮನಿ ಉಮಾದೇವಿ, ಎಚ್.ಎನ್‌. ವೀರಭದ್ರಪ್ಪ, ಹಳ್ಳಿ ಅಶೋಕ, ಕಲ್ಲೇಶಪ್ಪ, ಅಕ್ಕಿ ಶಿವಕುಮಾರ್‌, ಚಪ್ಪರದಹಳ್ಳಿ ಕೊಟ್ರೇಶಪ್ಪ, ಡಿ.ಎಸ್‌. ಶಿವಮೂರ್ತಿ, ಕೊಡದಪ್ಪ, ಶೆಟ್ಟಿ ರಾಜಶೇಖರ್ ಮತ್ತಿತರರು ಇದ್ದರು.

ಪಂಚಮಸಾಲಿ ಸಮಾಜದ ಕೊಟ್ಟೂರು ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ ಸ್ವಾಗತಿಸಿದರು. ಶಿಕ್ಷಕ ಹಳ್ಳಿ ಆನಂದ ನಿರೂಪಿಸಿದರು.

Share this article