ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಹೋರಾಡುವೆ

KannadaprabhaNewsNetwork | Published : May 30, 2024 12:56 AM

ಸಾರಾಂಶ

ಮಾಗಡಿ: ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ತಾವು ಆಯ್ಕೆಯಾದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ನಿರುದ್ಯೋಗ ಭತ್ಯೆಯನ್ನು ಎಲ್ಲ ನಿರುದ್ಯೋಗಿ ಪದವೀಧರರಿಗೆ ವಿಸ್ತರಿಸಲು ಹೋರಾಟ ನಡೆಸುವುದಾಗಿ ಪಕ್ಷೇತರ ಅಭ್ಯರ್ಥಿ ಎಂ.ಪಿ.ಕರಬಸಪ್ಪ ತಿಳಿಸಿದರು.

ಮಾಗಡಿ: ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ತಾವು ಆಯ್ಕೆಯಾದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ನಿರುದ್ಯೋಗ ಭತ್ಯೆಯನ್ನು ಎಲ್ಲ ನಿರುದ್ಯೋಗಿ ಪದವೀಧರರಿಗೆ ವಿಸ್ತರಿಸಲು ಹೋರಾಟ ನಡೆಸುವುದಾಗಿ ಪಕ್ಷೇತರ ಅಭ್ಯರ್ಥಿ ಎಂ.ಪಿ.ಕರಬಸಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ಪ್ರಾಂಶುಪಾಲನಾಗಿರುವ ನಾನು, ರಾಜ್ಯದ ಅನುದಾನಿತ ಶಾಲಾ- ಕಾಲೇಜುಗಳ, ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಾಂಶುಪಾಲರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹೀಗಾಗಿ ಪದವೀಧರರ ಸಮಸ್ಯೆಗಳ ಸಂಪೂರ್ಣ ಅರಿವಿದ್ದು, ಪರಿಹಾರಕ್ಕಾಗಿ ಮೇಲ್ಮನೆಯಲ್ಲಿ ಹೋರಾಟ ನಡೆಸುತ್ತೇನೆ ಎಂದರು.

ಕಳೆದ ಮೂರು ದಶಕಗಳಿಂದ ಶಿಕ್ಷಕರು, ಉಪನ್ಯಾಸಕರು, ಪದವೀಧರರು ಸೇರಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಸಂಘಟನೆಗಳ ಜೊತೆಗೂಡಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದು, ಯಶಸ್ವಿಯೂ ಆಗಿದ್ದೇವೆ. ಖಾಸಗಿ ಅನುದಾನಿತ ಶಾಲಾ - ಕಾಲೇಜುಗಳ ಕಾಲ್ಪನಿಕ ವೇತನ ಬಡ್ತಿಯ ಹೊರಟ್ಟಿ ವರದಿ ಅನುಷ್ಠಾನ ಹಾಗೂ ಕನ್ನಡ ವಿಶೇಷ ವೇತನ ಇನ್ನೂ ಹಲವಾರು ಪ್ರಮುಖ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

2006ರ ಏಪ್ರಿಲ್ 1ರ ಹಿಂದೆ ಸೇವೆಗೆ ಸೇರಿ ನಂತರ ಅನುದಾನಕ್ಕೊಳಪಟ್ಟವರಿಗೆ ಹಿಂದಿನ ಸೇವೆ ಪರಿಗಣಿಸಿ, ವೇತನ ನಿಗದಿ ಹಾಗೂ ಹಳೆಯ ಪಿಂಚಣಿ ಹಾಗೂ 2006ರ ಏಪ್ರಿಲ್ 1ರ ನಂತರ ಸೇವೆಗೆ ಸೇರಿದವರಿಗೆ ಸರ್ಕಾರಿ - ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಮಂಜೂರಾತಿ ಕೊಡಿಸುವುದು. ಶಾಶ್ವತ ಅನುದಾನ ರಹಿತ ಶಾಲಾ- ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಹಾಗೂ ಸೇವಾ ಭದ್ರತೆ ಒದಗಿಸಲು ಶ್ರಮಿಸುವುದಾಗಿ ಹೇಳಿದರು.

ಸರ್ಕಾರಿ ನೌಕರರಿಗೆ ನಿಗದಿತ ಸಮಯದೊಳಗಾಗಿ ಬಡ್ತಿ ಹಾಗೂ ವರ್ಗಾವಣಾ ನೀತಿಯನ್ನು ಸರಳೀಕರಿಸುವುದು. ಅನುದಾನಿತ ಶಾಲಾ- ಕಾಲೇಜುಗಳ ಅಸ್ತಿತ್ವಕ್ಕಾಗಿ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾರ್ಯಭಾರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು. ಅನುದಾನಿತ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇವುಗಳ ಅಸ್ತಿತ್ವಕ್ಕೆ ಶ್ರಮಿಸುವುದು. ಸಾವಿರಾರು ಬಿಇಡಿ ರಹಿತರ ವ್ಯಾಸಂಗಕ್ಕೆ ಈಗಾಗಲೇ ವಿನಾಯಿತಿ ಕೊಡಿಸಿದ್ದು, ಇನ್ನುಳಿದ ಕೆಲವರಿಗೆ ಅನುಮತಿ ಅಥವಾ ವಿನಾಯಿತಿ ಒದಗಿಸುವುದು. ಸರ್ಕಾರಿ ನೌಕರರಿಗಿರುವ ವೈದ್ಯಕೀಯ ಸೌಲಭ್ಯವನ್ನು ಅನುದಾನಿತ ನೌಕರಿಗೂ ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.

ಈ ಹಿಂದೆ ಇದ್ದಂತ ಪದವಿಪೂರ್ವ ಶಿಕ್ಷಣ ಇಲಾಖೆಯ ಹೆಸರು ಹಾಗೂ ಪರೀಕ್ಷಾ ಮಂಡಳಿಯ ಅಸ್ತಿತ್ವವನ್ನು ಮುಂದುವರೆಸಲು ಪ್ರಯತ್ನಿಸುವುದು. ಸರ್ಕಾರಿ ನೌಕರರಿಗಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ - ಅನುದಾನ ರಹಿತ ಶಾಲಾ- ಕಾಲೇಜುಗಳ ನೌಕರರಿಗೆ ವಿಸ್ತರಿಸಲು ಪ್ರಯತ್ನಿಸುವುದಾಗಿ ಕರಬಸಪ್ಪ ಹೇಳಿದರು.

ಇದೇ ವೇಳೆ ನಿವೃತ್ತ ಮುಖ್ಯ ಶಿಕ್ಷಕ ಡಿ.ಹೆಚ್.ಶಿವಕುಮಾರ್, ಒಕ್ಕೂಟ ಕಾರ್ಯದರ್ಶಿ ಚಂದ್ರೆಗೌಡ, ಚನ್ನಬಸಪ್ಪ, ಸುಭಾಷ್‌, ಪಟೇಲ್ ಇತರರು ಭಾಗವಹಿಸಿದ್ದರು. ಫೋಟೊ. 29ಮಾಗಡಿ1:

ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಎಂ.ಪಿ.ಕರಬಸಪ್ಪ ಮತಯಾಚನೆ ಮಾಡಿದರು.

Share this article