ಧಾರವಾಡ:
ಹೊಲ, ಮನೆ ಸೇರಿದಂತೆ ಆಸ್ತಿ ಕುರಿತಾಗಿ ರೈತರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಿರುವ ಎನಕಂಬರೆನ್ಸ್ (ಋಣಭಾರ) ಸರ್ಟಿಫಿಕೇಟ್ ಪಡೆಯಲು ಧಾರವಾಡದಲ್ಲಿ ಹತ್ತಾರು ದಿನಗಟ್ಟಲೇ ಕಾಯಬೇಕಾದ ದುಸ್ಥಿತಿ ಬಂದಿದೆ.ಈ ಮೊದಲು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ದೊರೆಯುತ್ತಿದ್ದ ಈ ಪ್ರಮಾಣ ಪತ್ರ ಅರ್ಜಿದಾರರ ಕೈಗೆ ಬೇಗ ಲಭ್ಯವಾಗಲೆಂದು ಎರಡು ವರ್ಷಗಳ ಹಿಂದೆಯೇ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಅರ್ಜಿದಾರರು ಸ್ವತಃ ಅಥವಾ ಕಂಪ್ಯೂಟರ್ ಸೆಂಟರ್‌ನಿಂದ ಅರ್ಜಿ ಹಾಕಿದರೆ ಎರಡ್ಮೂರು ದಿನಗಳಲ್ಲಿ ಅಥವಾ ಇನ್ನೂ ಬೇಗ ಸಿಗಲೆಂಬ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಿದರೆ, ಸಬ್ ರಿಜಿಸ್ಟ್ರಾರ್ (ಉಪ ನೋಂದಣಾಧಿಕಾರಿ) ಕಚೇರಿಯಿಂದ ಶಿಫಾರಸ್ಸಾಗಲು ತುಂಬ ಸಮಯ ಹಿಡಿಯುತ್ತಿದೆ.
ಕೈ ಬಿಸಿ ಮಾಡಿದರೆ ತಕ್ಷಣ:ಋಣಭಾರ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಹತ್ತಾರು ದಿನಗಳ ವರೆಗೂ ಉಪ ನೋಂದಣಾಧಿಕಾರಿ ಕಚೇರಿಯಿಂದ ಶಿಫಾರಸು ಆಗಲು ತಡವಾಗುತ್ತಿದೆ ಎಂದು ರೈತರು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಆಗುವ ಕಾರ್ಯ 10-12 ದಿನಗಳ ವರೆಗೆ ಕಾಯುವಂತಾಗಿದೆ. ಸ್ವತಃ ಅರ್ಜಿ ಹಾಕಲು ಬರದ ರೈತರು, ಸಾರ್ವಜನಿಕರು ಕಂಪ್ಯೂಟರ್ ಸೆಂಟರ್‌ಗಳ ಮೂಲಕ ಅರ್ಜಿ ಹಾಕಿದ್ದು, ಈ ಪ್ರಮಾಣ ಪತ್ರಕ್ಕಾಗಿ ತೀವ್ರ ಪರದಾಡುವಂತಾಗಿದೆ. ಒಂದೆಡೆ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಶಿಫಾರಸ್ಸಾಗದೇ ನಮಗೂ ಏನೂ ಮಾಡಲಾಗದು ಎಂದು ಕಂಪ್ಯೂಟರ್ ಸೆಂಟರ್‌ನವರು ಕೈಚೆಲ್ಲುತ್ತಿದ್ದಾರೆ. ಇನ್ನೊಂದೆಡೆ ಪ್ರತಿಯೊಂದು ಅರ್ಜಿ ಶಿಫಾರಸು ಆಗಲು ಕಚೇರಿಗೆ ಹಣ ತಲುಪಿದಾಗ ಮಾತ್ರ ಆನ್‌ಲೈನ್ ನಲ್ಲಿ ಅರ್ಜಿ ಮುಂದಕ್ಕೆ ಹೋಗುವ ಸ್ಥಿತಿಯೂ ಇದೆ ಎಂದು ಅರ್ಜಿದಾರರೊಬ್ಬರು ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮೇಲೆ ಗಂಭೀರ ಆರೋಪ ಮಾಡಿದರು. ಒಂದು ಅರ್ಜಿಗೆ ಕನಿಷ್ಠ ₹ 100 ನೀಡಿದರೆ ಮಾತ್ರ ಸರಿ. ಇಲ್ಲದೇ ಇದ್ದಲ್ಲಿ ವಾರಗಟ್ಟಲೇ ಅರ್ಜಿ ಇಟ್ಟುಕೊಳ್ಳುತ್ತಾರೆ. ಈ ಬಗ್ಗೆ ಕೇಳಿದರೆ ಸರ್ವರ್ ಸಮಸ್ಯೆ ಎಂದು ಸಬೂಬು ಹೇಳುತ್ತಾರೆ ಎಂದು ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏತಕ್ಕಾಗಿ ಬೇಕು ಇಸಿ:ಋಣಭಾರ ಪತ್ರ ಆಸ್ತಿ ಹೊಂದಿದ ಪ್ರತಿಯೊಬ್ಬರಿಗೂ ಪ್ರಮುಖ ದಾಖಲೆ. ಈ ಪ್ರಮಾಣ ಪತ್ರವನ್ನು ಉಪ ನೋಂದಣಾಧಿಕಾರಿ ಕಚೇರಿಯಿಂದ ಶಿಫಾರಸು ಮಾಡಿದಾಗಲೇ ಆನ್‌ಲೈನ್‌ನಲ್ಲಿ ಪಡೆಯಬಹುದು. ಆಸ್ತಿ ಖರೀದಿ ಅಥವಾ ಮಾರಾಟ, ಬ್ಯಾಂಕ್ ಸಾಲ, ಸಾಲದ ನವೀಕರಣ ಸಂದರ್ಭದಲ್ಲಿ ಪ್ರಮುಖವಾಗಿ ಬೇಕಾದ ದಾಖಲೆ ಇದು. ಆಸ್ತಿ ಖರೀದಿಸುವವರು ಆಸ್ತಿ ಮೇಲೆ ಹಣಕಾಸಿನ ಋಣಭಾರ ಇದೆಯೇ, ಕಾನೂನಿನ ತೊಡಕು ಇದೆಯೇ ಸೇರಿದಂತೆ ಆಸ್ತಿ ಕುರಿತಾದ ನೈಜ ಸಂಗತಿಯನ್ನು ಈ ಪ್ರಮಾಣ ಪತ್ರ ತಿಳಿಸುತ್ತದೆ. ಜತೆಗೆ ರೈತರ ಬೆಳೆಸಾಲ ಸೇರಿದಂತೆ ಪ್ರತಿಯೊಬ್ಬರು ಬ್ಯಾಂಕ್ ಸಾಲ ಮಾಡಲು ಕಡ್ಡಾಯವಾಗಿ ಈ ಪ್ರಮಾಣ ಪತ್ರ ಬೇಕು. ಈ ಪ್ರಮಾಣಪತ್ರದಲ್ಲಿ ಆಸ್ತಿಯು ಎಲ್ಲ ರೀತಿಯ ಹೊಣೆಗಾರಿಕೆಯಿಂದ ಮುಕ್ತವಾಗಿದೆ ಎಂದಾಗಲೇ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಸುಧಾರಿಸಲಿ ವ್ಯವಸ್ಥೆ:ಈ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉಪ ನೋಂದಣಾಧಿಕಾರಿ ಲಕ್ಷ್ಮಿಕಾಂತ ಲಕ್ಕೊಂಡೆ ಅವರಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಆದರೆ, ಜಿಲ್ಲಾಧಿಕಾರಿ ದಿವ್ಯಪ್ರಭು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದ್ದು ಕಚೇರಿ ಸಿಬ್ಬಂದಿ ಅವರ ಮೂಲಕ ಹಣ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಋಣಭಾರ ಪ್ರಮಾಣ ಪತ್ರ ಸಿಗದೇ ಅದೆಷ್ಟೋ ರೈತರ ಬ್ಯಾಂಕ್ ಸಾಲ ನವೀಕರಣ ಆಗಿಲ್ಲ, ನಿಗದಿತ ಸಮಯಕ್ಕೆ ಪ್ರಮಾಣ ಪತ್ರ ದೊರೆಯದ ಕಾರಣ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಬಡ್ಡಿ ತುಂಬುವ ಸಂಗತಿಗಳೂ ಆಗಿವೆ. ಈ ಪ್ರಮಾಣ ಪತ್ರ ಸಿಗದೇ ಬೆಳೆಸಾಲ ಪಡೆಯಲು ಸಹ ರೈತರಿಗೆ ತೊಂದರೆಗಳಾಗಿದ್ದೂ ಇನ್ನಾದರೂ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಹಣಕ್ಕಾಗಿ ಮೊರೆ ಇಡದೇ ಸಾರ್ವಜನಿಕರ ಕೆಲಸಗಳನ್ನು ತುರ್ತಾಗಿ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.