ಕನ್ನಡಪ್ರಭ ವಾರ್ತೆ ಮಳವಳ್ಳಿ
ಈ ಬಾರಿ ಗಣೇಶನ ಪ್ರತಿಷ್ಠಾಪನೆಗಾಗಿ ಕೆಲವೊಂದು ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ಅನುಮತಿಗಾಗಿ ಯುವಕರು, ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವೊಂದು ಇಲಾಖೆಗಳ ಸಿಬ್ಬಂದಿ ಹಣ ಪೀಕಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಹಾಗೂ ಸೆಸ್ಕಾಂ ಇಲಾಖೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಬರೆಯಬೇಕಾಗಿದೆ. ₹200 ಇ- ಸ್ಟ್ಯಾಂಪಿಂಗ್ ಹಾಗೂ ಜೆರಾಕ್ಸ್ ಗಾಗಿ ಅಂಗಡಿಗಳನ್ನು ಸುತ್ತುವಂತಾಗಿದೆ. ₹200 ಇ- ಸ್ಟ್ಯಾಂಪ್ ಗೆ ₹400 ಕೊಡಬೇಕು. ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ, ಪೊಲೀಸ್, ಅಗ್ನಿ ಶಾಮಕದಳದ ಅಧಿಕಾರಿಗಳು ಉಪಸ್ಥಿತಿ ಇದ್ದರೂ ಕೂಡ ಕೆಲವೊಂದು ದಾಖಲಾತಿಗಾಗಿ ಅಲೆದಾಟ ನಡೆಸುವಂತಾಗಿದೆ.ಸೆಸ್ಕಾಂ ಇಲಾಖೆ ವತಿಯಿಂದ ಅನುಮತಿ ಪಡೆಯಲು ಎಲೆಕ್ಟ್ರಾನಿಕ್ ಗುತ್ತಿಗೆದಾರಿಂದ ಸಹಿ ಹಾಗೂ ಸೀಲು ಕಡ್ಡಾಯ ಎನ್ನುವುದನ್ನೆ ಬಂಡವಾಳವಾಗಿಸಿಕೊಂಡ ಗುತ್ತಿಗೆದಾರರು ಸೆಸ್ಕಾಂ ಕಚೇರಿ ಮುಂದೆಯೇ ಸಹಿ ಹಾಗೂ ಸೀಲು ಹಾಕಲು ಗಣೇಶೋತ್ಸವ ಸಮಿತಿಯ ಸದಸ್ಯರಿಂದ ರಾಜಾರೋಷವಾಗಿಯೇ ₹500 ಕೊಡಬೇಕೆಂದು ತಾಕೀತು ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ.
ಯುವಕರು ಹಬ್ಬದ ಸಿದ್ಧತೆಗಳನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ತಾಲೂಕು ಕಚೇರಿಗೆ ಅಲೆದಾಟ ನಡೆಸಿ ಅನುಮತಿ ಪತ್ರ ಪಡೆದು ತಮ್ಮ ಗ್ರಾಮಗಳಿಗೆ ವಾಪಸ್ ಹಿಂತಿರುಗುತ್ತಿದ್ದಾರೆ. ಸೆಸ್ಕಾಂ ಕಚೇರಿ ಮುಂದೆ ಗುತ್ತಿಗೆದಾರರು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ₹500 ವಸೂಲಿ ಮಾಡುತ್ತಿರುವುದನ್ನು ಯುವಕರು, ಗ್ರಾಮಸ್ಥರು ಖಂಡಿಸಿದ್ದಾರೆ.
ಕಾನೂನು ಸುವ್ಯವಸ್ಥೆಯಿಂದ ಅನುಮತಿ ಪಡೆಯುವುದು ಉತ್ತಮ ಬೆಳವಣಿಗೆಯಾದರೂ ಕೆಲವೊಂದು ದಾಖಲಾತಿಗಳನ್ನು ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಅನುಮತಿ ಕೊಡಬೇಕು. ಸಾರ್ವಜನಿಕ ಅಲೆದಾಟ ತಪ್ಪಿಸಲು ಅನ್‌ಲೈನ್ ಅನುಮತಿ ಪಡೆಯುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಬೇಕೆಂದು ಯುವಕರು, ಸಾರ್ವಜನಿಕರು ಮನವಿ ಮಾಡಿದ್ದಾರೆ.