ಕನ್ನಡಪ್ರಭ ವಾರ್ತೆ ಬೆಂಗಳೂರು
76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಅಂಬೇಡ್ಕರ್ ಅವರ ಜನ್ಮಸ್ಥಳದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಭೆ ನಡೆಸುತ್ತಿದ್ದು, ನಾನೂ ಅದರಲ್ಲಿ ಭಾಗವಹಿಸುತ್ತಿದ್ದೇನೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ಮಾಡುತ್ತಿರುವ ತೊಂದರೆ, ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವ ವಿರುದ್ಧ ಅಲ್ಲಿ ಧ್ವನಿ ಎತ್ತಲಾಗುವುದು ಎಂದು ಹೇಳಿದರು.ಮಹಿಳೆಯರ ಸ್ವಾತಂತ್ರ್ಯ ಮೊಟಕು: ಸಂವಿಧಾನ ರಕ್ಷಣೆ ಹಾಗೂ ಸಂವಿಧಾನದ ಪ್ರಕಾರವಾಗಿ ನಡೆದುಕೊಳ್ಳುವುದು ಅತಿ ಮುಖ್ಯ. ಆದರೆ ಈಗಿರುವ ಕೇಂದ್ರ ಸರ್ಕಾರ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಮೂಲೆಗುಂಪು ಮಾಡುತ್ತಿದೆ. ಇದರಿಂದ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳು, ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಸಿಗುವ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತಿದೆ ಎಂದು ದೂರಿದರು.
ಪ್ರತಿಯೊಂದಕ್ಕೂ ಅಂಬೇಡ್ಕರ್ ಹೆಸರು ಜಪ ಮಾಡುತ್ತೀರಿ. ಅದರ ಬದಲು ದೇವರ ಹೆಸರು ಜಪಿಸಿದ್ದರೆ 7 ಜನ್ಮದಲ್ಲಿ ಸ್ವರ್ಗ ಸಿಗುತ್ತಿತ್ತು ಎಂದು ಸಂಸತ್ತಿನಲ್ಲಿ ಶಾ ಹೇಳಿದ್ದಾರೆ. ಈ ದೇಶ ನರಕದಲ್ಲಿದ್ದಾಗ ಇವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲಿಲ್ಲ. ಕೇಂದ್ರ ಸರ್ಕಾರ ದೇಶದ ಪ್ರಜೆಗಳನ್ನು ಹೀನಾಯವಾಗಿ ನೋಡುತ್ತಿದೆ. ಅತೀ ಶ್ರೀಮಂತರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಸರ್ಕಾರ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಬಡವರನ್ನು ಕಡೆಗಣಿಸುತ್ತಿದೆ. ಹೀಗಾಗಿ ನಾವು ಹೋರಾಟ ಮಾಡಬೇಕಾಗಿದೆ ಎಂದು ಖರ್ಗೆ ಹೇಳಿದರು.