ಧಾರವಾಡ: ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳ, ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಹಾಗೂ ವಿವಿಧ ಬೇಡಿಕೆಗಳ ಪರಿಹಾರಕ್ಕಾಗಿ ಹಾವೇರಿಯಲ್ಲಿ ಅಕ್ಟೋಬರ್ 4 ಮತ್ತು 5ರಂದು ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್., ಹೇಳಿದರು.
ಎಸ್ಎಫ್ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದ ಲೋಗೋವನ್ನು ಇಲ್ಲಿಯ ಸಾಹಿತ್ಯ ಪರಿಷತ್ ಭವನದಲ್ಲಿ ಬಿಡುಗಡೆ ಮಾಡಿದ ಅವರು, ಅಕ್ಟೋಬರ್ 4 ಹಾಗೂ 5ರಂದು ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ರಾಜ್ಯದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು, ಮೂಲಸೌಕರ್ಯಗಳ ಕುರಿತು ಚರ್ಚಿಸಲಾಗುವುದು. ಈಗಾಗಲೇ ರಾಜ್ಯದಲ್ಲಿರುವ ಎಸ್ಸಿ 3.5 ಲಕ್ಷ ವಿದ್ಯಾರ್ಥಿಗಳು ಪೈಕಿ 2400 ವಸತಿ ನಿಲಯಗಳು, ಎಸ್.ಟಿ 1.5 ಲಕ್ಷ ವಿದ್ಯಾರ್ಥಿಗಳು ಪೈಕಿ 1200 ವಸತಿ ನಿಲಯಗಳು, ಒಬಿಸಿ 2.5 ವಿದ್ಯಾರ್ಥಿಗಳ ಪೈಕಿ 2500 ನಿಲಯಗಳು ಒಟ್ಟು 7.5 ವಿದ್ಯಾರ್ಥಿಗಳು ಮತ್ತು 6000ಕ್ಕೂ ಅಧಿಕ ನಿಲಯಗಳಿವೆ. ಈ ನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನೇಮಕಾತಿ ವಿಳಂಬದ ಕಾರಣದಿಂದಾಗಿ ನಿಲಯ ಪಾಲಕರ, ಸ್ವಚ್ಛತಾ ಸಿಬ್ಬಂದಿ ಕೊರತೆ ಹೆಚ್ಚಿದೆ. ಟೆಂಡರ್‌ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಜೈಲಿನಲ್ಲಿರುವ ಕೈದಿಗಳಿಗಿಂತ ಕಡೆಯಾಗಿ ಕಾಣಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಸಮಾಜ ಕಲ್ಯಾಣ ಇಲಾಖೆ ₹14 ಕೋಟಿ ಹಣ ಕೇಳಿದ್ದು, ಸರ್ಕಾರ ನೀಡುತ್ತಿಲ್ಲ. ಮೆಟ್ರಿಕ್ ವಿದ್ಯಾರ್ಥಿಗಳಿಗೆ ₹1750 ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ₹1850 ಆಹಾರ ಭತ್ಯೆಯನ್ನು ನೀಡಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಪ್ರತಿ ವಿದ್ಯಾರ್ಥಿಗೆ ₹4,500 ಆಹಾರ ಭತ್ಯಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ನಾಗರಾಜ ಇಟಗಿ, ಮುಖಂಡ ಅರುಣ್ ನಾಗವತ್ ಮಾತನಾಡಿದರು. ಮುಖಂಡ ಕೃಷ್ಣ ನಾಯ್ಕ, ಭೂಮಿಕಾ ಪತ್ತಾರ, ಅಶ್ವಿನಿ ಎಲ್.ಕೆ, ವೀರೇಶ್ ಕೆ, ಮಲ್ಲಿಕಾರ್ಜುನ್ ಜೌಲಿ, ಮಿಥುನ್ ಮಾದರ, ಹನುಮಂತಪ್ಪ ಬಳ್ಳಾರಿ ಮತ್ತಿತರರು ಇದ್ದರು.