ಜಪಾನ್‌ನಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ: ರಿಪಬ್ಲಿಕನ್‌ ಸೆಂಟ್ರಲ್‌ ಶಾಲೆ ವಿದ್ಯಾರ್ಥಿಗಳು

KannadaprabhaNewsNetwork | Published : May 8, 2024 1:00 AM

ಸಾರಾಂಶ

ಜಪಾನ್‌ ದೇಶದಲ್ಲಿ ಮೇ 29ರಿಂದ ಜೂ.6ರವರೆಗೆ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಗ್ರಾಮದ ರಿಪಬ್ಲಿಕ್‌ ಸೆಂಟ್ರಲ್‌ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಆ ದೇಶದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಶಿಕ್ಷಣ, ತಂತ್ರಜ್ಞಾನ, ಅಲ್ಲಿನ ಪಠ್ಯಕ್ರಮ, ತರಗತಿಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಳ್ಳುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಪಾನ್‌ ದೇಶದಲ್ಲಿ ಮೇ 29ರಿಂದ ಜೂ.6ರವರೆಗೆ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಗ್ರಾಮದ ರಿಪಬ್ಲಿಕ್‌ ಸೆಂಟ್ರಲ್‌ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಮಂಜು ತಿಳಿಸಿದರು.

ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಅಜಿತ್‌ ಪಿ.ಗೌಡ ಮತ್ತು ಹಿತಶ್ರೀ ಪ್ರಸಾದ್‌ ಜಪಾನ್‌ ದೇಶಕ್ಕೆ ತೆರಳಲು ಆಯ್ಕೆಯಾಗಿರುವ ವಿದ್ಯಾರ್ಥಿಗಳಾಗಿದ್ದಾರೆ. ಜಪಾನ್‌ನ ಹ್ಯೂಗೊ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ನವರು ಪ್ರತಿ ವರ್ಷ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಳೆದ ಸಾಲಿನಲ್ಲಿ ಏಳನೇ ತರಗತಿಯ ವಿದ್ಯಾರ್ಥಿ ಶಾನ್‌ ಸ್ಟೀವನ್‌ ಡಾಲ್ಮೇಡಾ ಮತ್ತು ಎಂಟನೇ ತರಗತಿಯ ಧನ್ಯ ಜೆ.ಗೌಡ ಅವರು ಆಯ್ಕೆಯಾಗಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ನಡೆದ ಪರೀಕ್ಷೆಗೆ ಶಾಲೆಯ 78 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡನೇ ಹಂತದ ಪ್ರಾಯೋಗಿಕ ಪರೀಕ್ಷೆಗೆ 12 ವಿದ್ಯಾರ್ಥಿಗಳು ಆಯ್ಕೆಯಾಗಿ ಅಂತಿಮವಾಗಿ ನಡೆದ ಓರಲ್‌ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳಲ್ಲಿ ಇಬ್ಬರು ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.

ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ವಿವಿಧ ದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಆ ದೇಶದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ಶಿಕ್ಷಣ, ತಂತ್ರಜ್ಞಾನ, ಅಲ್ಲಿನ ಪಠ್ಯಕ್ರಮ, ತರಗತಿಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಳ್ಳುವರು ಎಂದರು.

ಜಪಾನ್‌ನ ಸಂಸ್ಕೃತಿ, ಉಡುಗೆ-ತೊಡುಗೆ, ಊಟ ಸೇರಿದಂತೆ ಜನಜೀವನದ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಹೋಮ್‌ ಸ್ಟೇಗೂ ಅವಕಾಶ ಮಾಡಿಕೊಡಲಾಗುವುದು. ಭೂಕಂಪದ ಬಗ್ಗೆ ತಿಳಿಸಿಕೊಡಲಾಗುವುದು. ಬುಲೆಟ್‌ ಟ್ರೈನ್‌ ಕಾರ್ಯನಿರ್ವಹಣೆಯನ್ನು ಪ್ರತ್ಯಕ್ಷವಾಗಿ ತೋರಿಸಲಾಗುತ್ತದೆ ಎಂದು ನುಡಿದರು.

ಜಪಾನ್‌ ದೇಶದಿಂದ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ. ಅಲ್ಲಿ ಪಠ್ಯ ವಿಷಯಗಳಿಗಿಂತಲೂ ವಾಸ್ತವ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅಲ್ಲಿನ ಮಕ್ಕಳಿಗೆ ಇಲ್ಲಿನ ಭಾಷೆ, ಶಿಕ್ಷಣ, ಸಂಸ್ಕೃತಿಯನ್ನು ನಮ್ಮ ವಿದ್ಯಾರ್ಥಿಗಳು ಪರಿಚಯಿಸಿಕೊಡಲಿದ್ದಾರೆ ಎಂದು ನುಡಿದರು.

ಶಾಲೆಯ ಪ್ರಾಂಶುಪಾಲೆ ಸುನೀತಾ ರಾಜನ್‌ ಮಾತನಾಡಿ, ನಮ್ಮ ಮಕ್ಕಳು ಜಪಾನ್‌ ದೇಶದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಪ್ರದೇಶದ ಮಕ್ಕಳು ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ದೂರದ ಜಪಾನ್‌ ದೇಶದ ಮಕ್ಕಳಿಗೂ ಪರಿಚಯಿಸುತ್ತಾರೆ. ಇಲ್ಲಿನ ಸಂಸ್ಕೃತಿ, ಉಡುಗೆ-ತೊಡುಗೆ, ಶಿಕ್ಷಣ ವ್ಯವಸ್ಥೆಯನ್ನು ಅಲ್ಲಿನವರಿಗೆ ತಿಳಿಸಿಕೊಟ್ಟು ಆ ದೇಶದ ಶಿಕ್ಷಣ, ಸಂಸ್ಕೃತಿ, ಜನಜೀವನದ ಅನುಭವ ಪಡೆದುಕೊಂಡು ಬರುವುದು ರೋಚಕ ಎನಿಸುತ್ತದೆ ಎಂದರು.

ಗೋಷ್ಠಿಯಲ್ಲಿ ಜಪಾನ್‌ಗೆ ತೆರಳಲಿರುವ ಅಜಿತ್‌ ಪಿ.ಗೌಡ ಮತ್ತು ಹಿತೈಷಿ ಪ್ರಸಾದ್‌ ಇದ್ದರು.

Share this article