ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಿಸಲು ವಿದ್ಯಾರ್ಥಿ ಜೀವನವೇ ಅಡಿಪಾಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ವೇದಿಕೆಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬಾರದು, ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ತುದಿಗಾಲಿನಲ್ಲಿ ನಿಂತಿರಬೇಕು ಎಂದರು.
ಪತ್ರಿಕೆಗಳನ್ನು ಪ್ರತಿ ದಿನ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಜ್ಞಾನಾರ್ಜನೆ ವೃದ್ಧಿಗೊಳ್ಳುತ್ತದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯವಾದದ್ದು. ವಿದ್ಯಾರ್ಥಿ ಜೀವನ ಬಂಗಾರದ ಜೀವನ, ಹೀಗಾಗಿ ಪ್ರತಿ ಹೆಜ್ಜೆ ಬಹಳ ಶಿಸ್ತಿನಿಂದ ಕೂಡಿರಬೇಕು ಎಂದರು.ಜೀವನ ಎಂಬುದೇ ಒಂದು ಹೋರಾಟ. ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಹಂತವಿದು. ಅದನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು. ಹೆಣ್ಣಿನ ಜೀವನ ಕನ್ನಡಿ ಇದ್ದಂತೆ. ಅದು ಒಡೆದು ಹೋದರೆ ಮತ್ತೆ ಜೋಡಿಸಲು ಸಾಧ್ಯವಿಲ್ಲ. ಪ್ರತಿಭೆಯಿದ್ದರೆ ಸನ್ಮಾನ ನಮ್ಮನ್ನು ಹಿಂಬಾಲಿಸುತ್ತದೆ ಎಂದರು.
ಸಮಾಜಮುಖಿ ಚಿಂತಕಿ ಎ. ಪುಷ್ಪಾ ಅಯ್ಯಂಗಾರ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭವಾಗಿದ್ದಾರೆ. ಹೊಸಮಠದ ಶ್ರೀಗಳು ನೇರ ನಡೆ ನುಡಿಗೆ ಹೆಸರಾದವರು. ಸಮಾಜ ಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಒತ್ತು ಕೊಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಪ್ರತಿಭೆ ಇದ್ದರೆ ಪುರಸ್ಕಾರ ತಾನೇ ಹುಡುಕಿಕೊಂಡು ಬರುತ್ತದೆ. ಬದುಕಿನಲ್ಲಿ ಬಡತನವಿದ್ದರು ಪ್ರತಿಭೆಯಲ್ಲಿ ಬಡತನವಿಲ್ಲ. ಇಂತಹ ವೇದಿಕೆಗಳು ಪ್ರತಿಭೆ ಅನಾವರಣಗೊಳಿಸಲು ಸಹಾಯಕವಾಗುತ್ತವೆ ಎಂದರು.
ಅದೇ ರೀತಿ ಶ್ರಮ ಇದ್ದ ಕಡೆ ಪುರಸ್ಕಾರ ಇದ್ದೇ ಇರುತ್ತದೆ. ಪ್ರತಿಭೆಗೆ ಯಾವುದೇ ಜಾತಿ, ಧರ್ಮ, ವರ್ಗ ಇರುವುದಿಲ್ಲ. ಎಲ್ಲರೂ ಮನುಜ ಮತದ ಮೂಲಕ ವಿಶ್ವ ಪಥವನ್ನು ಸಾಧಿಸಬೇಕು. ಅದಕ್ಕೆ ಈ ಕಾಲೇಜು ಪೂರಕವಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದರು.ಇದೇ ವೇಳೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜಸೇವಕಿ ಎ.ವೈದೇಹಿ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಶಾರದಾ, ಸಾಂಸ್ಕೃತಿಕ ವೇದಿಕೆ ಎಂ.ಎಸ್. ಸಂಧ್ಯಾರಾಣಿ, ಎನ್ಎಸ್ಎಸ್ ಎನ್.ತ್ರಿವೇಣಿ, ಕ್ರೀಡಾ ವೇದಿಕೆಯ ಕೆ.ಎಂ.ಹೇಮಾವತಿ ಇದ್ದರು. ಚೂಡಾಮಣಿ ಪ್ರಾರ್ಥಿಸಿದರು. ನಿತ್ಯಾ ಸ್ವಾಗತಿಸಿದರು. ಎಸ್. ರಕ್ಷಾ ವಂದಿಸಿದರು. ಅನನ್ಯ ನಿರೂಪಿಸಿದರು.
ನಾಳೆ ಕಥೆ ಕೇಳೋಣ ಬನ್ನಿಮೈಸೂರು: ಕಲಾಸುರುಚಿ ಸಂಸ್ಥೆಯು ಸೆ.20ರ ಸಂಜೆ 4.30 ರಿಂದ 5.30 ರವರೆಗೆ ಕುವೆಂಪುನಗರ ಚಿತ್ರಭಾನು ರಸ್ತೆಯಲ್ಲಿರುವ ಸುರುಚಿ ರಂಗಮನೆಯಲ್ಲಿ ಕಥೆ ಕೇಳೋಣ ಬನ್ನಿ- 898 ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ.ಜಿ.ಎ. ಸುಬ್ಬುಲಕ್ಷ್ಮಿ ಅವರು ಮಕ್ಕಳಿಗೆ ಕಥೆ ಹೇಳಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 92435 81097, 99459 43115 ಸಂಪರ್ಕಿಸಬಹುದು ಎಂದು ಸಂಸ್ಥೆಯ ವಿಜಯಾ ಸಿಂಧುವಳ್ಳಿ ತಿಳಿಸಿದ್ದಾರೆ.