ಶಿಕ್ಷಣ ಸಮಾಜದಲ್ಲಿ ಬದಲಾವಣೆ ತರುತ್ತದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿ ಮತ್ತು ಇತೆರಲ್ಲಾ ಸಮುದಾಯಗಳ ಯಾರೊಬ್ಬ ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ : ಶಿಕ್ಷಣ ಸಮಾಜದಲ್ಲಿ ಬದಲಾವಣೆ ತರುತ್ತದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿ ಮತ್ತು ಇತೆರಲ್ಲಾ ಸಮುದಾಯಗಳ ಯಾರೊಬ್ಬ ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾವು ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ 25 - 30 ಕಂಡುಬಂದಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ, ಅಗತ್ಯ ಸೌಲಭ್ಯಗಳಿಗೆ ಒತ್ತು ನೀಡಬೇಕು. ಈ ಬಗ್ಗೆ ಜಿಲ್ಲಾ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ, ಪರಿಶೀಲಿಸಬೇಕು ಎಂದರು.ಜಿಲ್ಲೆಯಲ್ಲಿ 1522 ಅಂಗನವಾಡಿಗಳಿದ್ದು, ಅವುಗಳಲ್ಲಿ 155 ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಪಟ್ಟ ಅಂಗನವಾಡಿಗಳು ಇವೆ. ಈ ಅಂಗನವಾಡಿಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಕಿ, ಸಹಾಯಕಿಯರೇ ಕಾರ್ಯನಿರ್ವಹಿಸುವಂತೆ, ಒಂದೊಮ್ಮೆ ಈ ಸಮುದಾಯದವರು ಮುಂದೆ ಬಾರದಿದ್ದಾಗ ಸ್ಥಳೀಯ ಅರ್ಹರನ್ನು ಭರ್ತಿ ಮಾಡಬೇಕು ಎಂದವರು ಹೇಳಿದರು.ಜಿಲ್ಲೆಯಲ್ಲಿ 7 ಸರ್ಕಾರಿ, 4 ಅನುದಾನಿತ ಹಾಗೂ 1 ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು, ಇಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ವಿದೇಶಗಳಲ್ಲಿರುವ ಉದ್ಯೋಗಾವಕಾಶ ಬಗ್ಗೆ ರಾಜ್ಯ ಓವರ್‌ಸೀಸ್ ಎಂಪ್ಲಾಯ್‌ಮೆಂಟ್ ಸೆಲ್‌ನಿಂದ ಮಾಹಿತಿ ಪಡೆದು, ಆ ಮೂಲಕ ಸ್ಥಳೀಯರು ವಿದೇಶಗಳಲ್ಲಿ ಉದ್ಯೋಗ ಪಡೆಯಲು ಒತ್ತು ನೀಡಬೇಕು ಎಂದರು.ಅಲ್ಪಸಂಖ್ಯಾತ ಸಮುದಾಯದ ಅಸಂಘಟಿತ ಕಾರ್ಮಿಕರಿಗೆ ಇ- ಶ್ರಮ್ ಯೋಜನೆಯಡಿ ನೋಂದಾಯಿಸಲು ಹೆಚ್ಚಿನ ಪ್ರಚಾರ ನೀಡಿ, ಅವರಲ್ಲಿ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿ, ಟೂಲ್‌ಕಿಟ್‌ಗಳನ್ನು ವಿತರಿಸಿ ಎಂದವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ 9 ಯೋಜನೆಗಳಿದ್ದು, ಜಿಲ್ಲೆಯಲ್ಲಿ 151 ಗುರಿಗೆ 142 ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ 5804 ಮಂದಿ ಕೃಷಿಯಲ್ಲಿ ತೊಡಗಿದ್ದು, ಅವರಲ್ಲಿ 3339 ಮಂದಿ ಸ್ವಂತ ಕೃಷಿ ಭೂಮಿ ಹೊಂದಿದ್ದಾರೆ, 8563 ಫಲಾನುಭವಿಗಳು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ ಎಂದವರು ವಿವರ ನೀಡಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಆಯೋಗದ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಎಎಸ್ಪಿ ಸುಧಾಕರ ನಾಯಕ್, ಅಲ್ಪ ಸಂಖ್ಯಾತ ಸಮುದಾಯದ ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ., ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಜಿಲ್ಲಾ ಸಮಿತಿ ಸದಸ್ಯ ನಕ್ವಾ ಯಾಹ್ಯಾ, ಅ.ಅ.ನಿಗಮದ ಜಿಲ್ಲಾ ವ್ಯವಸ್ಥಾಪಕ ಯಶೋಧರ, ವಕ್ಫ್ ಅಧಿಕಾರಿ ಅಬ್ದುಲ್ ಲತೀಫ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.