ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಮಾಡಿ: ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ

KannadaprabhaNewsNetwork | Published : Dec 23, 2024 1:00 AM

ಸಾರಾಂಶ

ಹಾಸನ ಜಿಲ್ಲೆ ಒಂದು ಅದ್ಭುತ ಜಗತ್ತು. ನಮ್ಮಲ್ಲಿರುವ ಸಂಸ್ಕೃತಿ, ರಾಜಕೀಯ ಬೇರೆ ಜಿಲ್ಲೆಯಲ್ಲಿಲ್ಲ, ನಮ್ಮ ಜಿಲ್ಲೆಯ ಮಹತ್ವವನ್ನು ಸಾರುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಲು, ಸಂಘ ಸದೃಢವಾಗಿ ಬೆಳೆಯಲು ಎಲ್ಲ ಸದಸ್ಯರು ಸಹಕಾರ ನೀಡಬೇಕು .

ಕನ್ನಡಪ್ರಭ ವಾರ್ತೆ ಮೈಸೂರು

ಹಾಸನ ಜಿಲ್ಲಾ ಬಳಗ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಳೆದ 14 ವರ್ಷಗಳಿಂದ ಒಗ್ಗಟ್ಟಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಮಾಡುತ್ತಿದ್ದು, ವಿದ್ಯಾರ್ಥಿಗಳು ನಿರಂತರ ಪ್ರಯತ್ನದಿಂದ ಗುರಿಮುಟ್ಟುವವರೆಗೆ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಹೇಳಿದರು.

ಹಾಸನ ಜಿಲ್ಲಾ ಬಳಗದ ವತಿಯಿಂದ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲರೂ ಈ ಭೂಮಿ ಮೇಲೆ ಆಕಸ್ಮಿಕವಾಗಿ ಹುಟ್ಟಿದ್ದೇವೆ, ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು, ನಾಡಿಗೆ, ದೇಶಕ್ಕೆ ಒಳ್ಳೆಯದನ್ನು ಮಾಡೋಣ, ಈ ಸಂಘ ಇನ್ನೂ ಉತ್ತಮ ಕೆಲಸ ಮಾಡಲಿ ಎಂದರು.

ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಮಾತನಾಡಿ, ಹಾಸನ ಜಿಲ್ಲೆ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದಲ್ಲಿರುವ ಸರ್ಕಾರಿ ಕಾಲೇಜುಗಳಿಗೆ ಹೆಚ್ಚು ಮಕ್ಕಳು ಓದಲು ಬರುತ್ತಿಲ್ಲ, ರಾಜ್ಯದಲ್ಲಿ 65 ಸಾವಿರ ಶಿಕ್ಷಕರ ಕೊರತೆ ಇದ್ದು, ಸರ್ಕಾರ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಬೇಕು, ಶಿಕ್ಷಕರ ಸಂಬಳವನ್ನು ಹೆಚ್ಚಿಸಬೇಕು ಎಂದು ಅವರು ಮುಡಾದಿಂದ ಸಿ.ಎ. ನಿವೇಶನವನ್ನು ಸಂಘಕ್ಕೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಹಾಸನ ಜಿಲ್ಲಾ ಬಳಗದ ಅಧ್ಯಕ್ಷೆ ಪಿ. ಶಾರದಮ್ಮ ಮಾತನಾಡಿ, ಹಾಸನ ಜಿಲ್ಲೆ ಒಂದು ಅದ್ಭುತ ಜಗತ್ತು. ನಮ್ಮಲ್ಲಿರುವ ಸಂಸ್ಕೃತಿ, ರಾಜಕೀಯ ಬೇರೆ ಜಿಲ್ಲೆಯಲ್ಲಿಲ್ಲ, ನಮ್ಮ ಜಿಲ್ಲೆಯ ಮಹತ್ವವನ್ನು ಸಾರುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಲು, ಸಂಘ ಸದೃಢವಾಗಿ ಬೆಳೆಯಲು ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದರು.

ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ, ಉದ್ಯಮಿ ಬಾಲಾಜಿ ಶೇಖರ್, ಗೌರವಾದ್ಯಕ್ಷ ಬಿ.ಬಿ. ರಾಮಕೃಷ್ಣ, ಉಪಾಧ್ಯಕ್ಷರಾದ ಮೋದಾಮಣಿ, ಯದುನಾಥ್, ಕೆ.ಈ. ಪುಟ್ಟಸ್ವಾಮಿಗೌಡ, ಪ್ರಧಾನ ಕಾರ್ಯದರ್ಶಿ ಬಿ.ಜಿ. ರಂಗೇಗೌಡ, ಖಜಾಂಚಿ ಡಾ.ಕೆ.ಎನ್. ಅಣ್ಣೇಗೌಡ, ಡಿ.ಎಂ. ಸುಬ್ಬೇಗೌಡ, ಡಾ.ಎಂ.ಎನ್. ಶಶಿಕುಮಾರ್, ತುಕಾರಾಮ್ ರಾವ್ ಇದ್ದರು.

Share this article