ಕನ್ನಡಪ್ರಭ ವಾರ್ತೆ ಕಲಬುರಗಿಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನವೆಂಬ ವಾಹನದ ಜವಾಬ್ದಾರಿಯುತ ಚಾಲಕನಿದ್ದಂತೆ. ಬದುಕಿನ ಪಯಣದಲ್ಲಿ ಎಚ್ಚರಿಕೆ, ಶಿಸ್ತು ಹಾಗೂ ಜಾಗರೂಕತೆ ವಹಿಸಿದರೆ ಎಂದಿಗೂ ಅಪಘಾತ, ಸೋಲು ಎದುರಾಗುವುದಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನ್ಯಾಯಮೂರ್ತಿ ಓಂಕಾರ್ ಮೂರ್ತಿ ಕೆ.ಎಂ ಹೇಳಿದರು.ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ (ಎಸ್‌ಬಿಆರ್) ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಮತ್ತು 2026–27ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.ಎಸ್.ಬಿ.ಆರ್ ಕಾಲೇಜು ಕೇವಲ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿ ದೆಸೆಯಲ್ಲಿಯೇ ಉನ್ನತ ಕನಸುಗಳನ್ನು ಕಂಡು, ಅವುಗಳನ್ನು ಸಾಕಾರಗೊಳಿಸಲು ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ದೃಢತೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಸರಳತೆ, ಅಚಲ ಕರ್ತವ್ಯನಿಷ್ಠೆಗಳೇ ನಮಗೆ ದಾರಿದೀಪ. ಬದುಕಿನ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಪರಿಶ್ರಮ ಮತ್ತು ತ್ಯಾಗವೇ ಗೆಲುವಿನ ಏಕೈಕ ಮೂಲಮಂತ್ರ ಎಂದರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್ ಅವರ ಮಾರ್ಗದರ್ಶನದ ಕಾರ್ಯಕ್ರಮವನ್ನು ವೈಷ್ಣವಿ ಬಿಜಾಪುರ ನಿರೂಪಿಸಿದರು, ಸಂದೇಶ ಎಸ್. ಸ್ವಾಗತಿಸಿ ವಂದಿಸಿದರು, ಪ್ರಣವ ಆದಿ ಅತಿಥಿಗಳ ಪರಿಚಯ ಮಾಡಿದರು.
ದಂಡಿ ಯಾತ್ರೆ ರೂಪಕ ಪ್ರದರ್ಶನ: ವಿದ್ಯಾರ್ಥಿಗಳಿಂದ ಭಾಷಣಗಳು, ಭಜನೆಗಳು, ಸರ್ವಧರ್ಮ ವಚನ ಪಠಣಗಳು ಹಾಗೂ ದಂಡಿ ಮಾರ್ಚ್ ರೂಪಕ ಪ್ರದರ್ಶನಗೊಂಡವು. ನರ್ಮದಾ ಚಂದ್ರಕಾಂತ, ಲಾರಾ ಆಯೇಷಾ ಸಿದ್ದಿಕಿ, ನಿಧಿ ಹರವಾಳ್ಕರ, ಹಫಿಜಾ ದರ್ಪಾಶನ್, ವರ್ಷಾ ಆರ್.ಕೆ, ಅಕ್ಷರಾ ಶಿರೋಳೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಕುರಿತು ಮಾತನಾಡಿದರು. ದಿವ್ಯಾ, ಸ್ವರೂಪಾನಂದ, ಮೊಹಮ್ಮದ ವಸಿಫ್, ಸೋನಿಯಾ, ಶಿವಾಶ್ರೀ, ಅಮೃತಾ ಹಾಗೂ ಸೃಷ್ಠಿ ಅವರು ಹಿಂದೂ, ಇಸ್ಲಾಂ, ಕ್ರೈಸ್ತ, ಸಿಖ, ಬೌಧ್ದ ಹಾಗೂ ಜೈನ್ ಧರ್ಮಗ್ರಂಥಗಳ ಪಠಿಸಿದರು. ವಿದ್ಯಾರ್ಥಿಗಳಾದ ನಮ್ರತಾ, ವೈಷ್ಣವಿ, ಶ್ರೀಗೌರಿ, ಖುಷಿ, ಅಕ್ಷತಾ, ಸಿಂಧು, ಭಾಗ್ಯಶ್ರೀ, ಪೃಥ್ವಿ ಭಜನೆ ಹಾಡಿದರು. ಗಾಂಧಿ ವೇಷಧಾರಿ ವಿಕ್ರಮ್ ರಾಜಕುಮಾರ್ ಹಾಗೂ ಶಾಸ್ತ್ರೀಜಿ ವೇಷಧಾರಿ ಪ್ರೀತಮ್ ನಾಗಭೂಷಣ್ ನೇತೃತ್ವದಲ್ಲಿ ನಡೆದ ಐತಿಹಾಸಿಕ ದಂಡಿ ಮಾರ್ಚ್ ಉಪ್ಪಿನ ಸತ್ಯಾಗ್ರಹದ ರೂಪಕ ಪ್ರದರ್ಶನಗೊಂಡವು.