ತುಳು ಭಾಷೆ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದು: ಪ್ರೀತಮ್‌ ನಾಯಕ್‌

KannadaprabhaNewsNetwork |  
Published : Mar 24, 2026, 02:30 AM IST
ಮಂಗಳೂರಲ್ಲಿ ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ ಉದ್ಘಾಟನೆ  | Kannada Prabha

ಸಾರಾಂಶ

ಎಲ್ಲ ಭಾಷೆಗಳಿಗೆ ಗೌರವ ನೀಡುವುದರೊಂದಿಗೆ ನಮ್ಮ ಕರಾವಳಿಯ ತುಳು ಭಾಷೆಗೆ ಹೆಚ್ಚಿನ ಮಾನ್ಯತೆ ನೀಡಿ ಅದನ್ನು ಉಳಿಸುವ ಜವಾಬ್ದಾರಿ ವಿದ್ಯಾರ್ಥಿ ಸಮುದಾಯದ ಮೇಲಿದೆ ಎಂದು ನಿಟ್ಟೆ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಪ್ರೀತಮ್‌ ನಾಯಕ್‌ ಹೇಳಿದರು.

ಮಂಗಳೂರು: ಎಲ್ಲ ಭಾಷೆಗಳಿಗೆ ಗೌರವ ನೀಡುವುದರೊಂದಿಗೆ ನಮ್ಮ ಕರಾವಳಿಯ ತುಳು ಭಾಷೆಗೆ ಹೆಚ್ಚಿನ ಮಾನ್ಯತೆ ನೀಡಿ ಅದನ್ನು ಉಳಿಸುವ ಜವಾಬ್ದಾರಿ ವಿದ್ಯಾರ್ಥಿ ಸಮುದಾಯದ ಮೇಲಿದೆ ಎಂದು ನಿಟ್ಟೆ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಪ್ರೀತಮ್‌ ನಾಯಕ್‌ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್‌ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ತುಳು ಭವನದಲ್ಲಿ ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯಲ್ಲಿ ಕಂಡುಬರುವ ಗಲಭೆ, ಅನ್ಯಾಯಗಳನ್ನು ನಿಲ್ಲಿಸುವ ತಾಕತ್ತು ಕೂಡ ವಿದ್ಯಾರ್ಥಿ ಶಕ್ತಿಗೆ ಇದೆ. ತುಳುವರದ್ದು ಒಂದೇ ಮನಸ್ಥಿತಿ ಆಗಿದ್ದು, ತುಳು ಸಂಸ್ಕೃತಿಯನ್ನು ಉಳಿಸಿ ಮುಂದುವರಿಸಬೇಕಾಗಿದೆ. ತಲಾ ಐದು ಕಿ.ಮೀ. ದೂರಕ್ಕೊಂದು ಭಾಷೆ, ಸಂಸ್ಕೃತಿ, ಆಹಾರ ವ್ಯತ್ಯಾಯಗೊಳ್ಳುತ್ತಲೇ ಹೋಗುತ್ತಿದೆ. ಆದರೆ ತುಳು ಭಾಷೆ ಎಲ್ಲ ಕಡೆಯೂ ಪಸರಿಸುತ್ತಿರಬೇಕು ಎಂದು ಅವರು ಆಶಿಸಿದರು. ತುಳು ಭಾಷೆ, ಸಂಸ್ಕೃತಿ ಎಂಬುದು ಬ್ರೆಡ್‌-ಜಾಮ್‌ ಇದ್ದಂತೆ ಎಂದ ಅ‍ವರು, ನಮ್ಮ ಹಿರಿಯರು ಬ್ರೆಡ್‌ ಆಗಿದ್ದರೆ, ನಾವು ಜಾಮ್‌ ಆಗಿರುತ್ತೇವೆ. ಹಿಂದಿನ ಮತ್ತು ಈಗಿನ ತಲೆಮಾರಿನ ಇಬ್ಬರಿಗೂ ಬೇಸರ ಆಗಬಾರದು, ನಮ್ಮ ಪರಂಪರೆಯನ್ನು ಗೌರವಿಸುತ್ತಾ, ಹಿಂದಿನ ಆಚಾರ, ವಿಚಾರಗಳನ್ನು ಪಾಲಿಸಿಕೊಂಡು ಈಗಿನ ಕ್ರಮವನ್ನೂ ಅನುಸರಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಹಿಂದೆ ಹಿರಿಯರು ಪಾಲಿಸುತ್ತಿದ್ದ ಪ್ರತಿಯೊಂದು ಸಂಪ್ರದಾಯಗಳಿಗೆ ವಿಜ್ಞಾನದ ನಂಟು ಇತ್ತು ಎಂದ ಅವರು, ಹಾಲು-ಮೊಸರಿನ ಬದಲು ಹಾಲಿನಂತೆ ಮನಸ್ಸು ಇದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ತುಳು ಅರಿವು ಮೂಡಿಸಿ: ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದ ಬ್ರಹ್ಮಾವರ ಎಸ್‌ಎಂಎಸ್‌ ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ, ಆಧುನಿಕತೆಯ ಭರಾಟೆಯಲ್ಲಿ ತುಳು ಭಾಷೆ ಮರೆಗೆ ಸರಿಯುವ ಭೀತಿ ಎದುರಾಗಿದೆ. ವಿದ್ಯಾರ್ಥಿಗಳ ಮೂಲಕ ತುಳು ತೇರು ಎಳೆಯುವ ಕೆಲಸವನ್ನು ಅಕಾಡೆಮಿ ಮತ್ತು ಪರಿಷತ್‌ ಮಾಡುತ್ತಿದೆ. ಟಿ.ವಿ, ಮೊಬೈಲ್‌ನ ದಾಸರಾಗಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ತುಳು ಭಾಷೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು. ತುಳುನಾಡಿನಲ್ಲಿ ಅನೇಕ ಹಬ್ಬಗಳು ನಡೆಯುತ್ತಿದ್ದು, ಪ್ರತಿಯೊಂದರಲ್ಲೂ ಸಾಮಾಜಿಕ ಸಾಮರಸ್ಯದ ಸಂದೇಶ ಇದೆ. ಇದು ಸಂಸ್ಕೃತಿ ಸೌಹಾರ್ದತೆಯ ದ್ಯೋತಕ. ಸಾಹಿತ್ಯ, ಸಂಸ್ಕೃತಿಗೆ ತುಳುನಾಡಿನ ಕೊಡುಗೆ ಅನನ್ಯವಾಗಿದೆ ಎಂದರು.

ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಮುಖ್ಯಸ್ಥ ಡಾ.ತುಕರಾಮ ಪೂಜಾರಿ ದಿಕ್ಸೂಚಿ ಭಾಷಣ ಮಾಡಿದರು.

ತುಳು ಪರಿಷತ್‌ ಅಧ್ಯಕ್ಷ ಶುಭೋದಯ ಆಳ್ವ ಪ್ರಾಸ್ತಾವಿಕ ಮಾತನಾಡಿದರು.ನಿಡುಸೋಸಿ ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ತುಳು ಪರಿಷತ್‌ ಗೌರವಾಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ, ತುಳು ಅಕಾಡೆಮಿ ರಿಜಿಸ್ಟ್ರಾರ್‌ ಪೂರ್ಣಿಮಾ, ಪ್ರಮುಖರಾದ ಬೆನೆಟ್‌ ಅಮ್ಮಣ್ಣ, ಸುಮತಿ ಹೆಗ್ಡೆ, ಅಮಿತ್‌ ಅಶ್ವಿತ್‌, ಕಲಾ ಸಿರಿ ಸಂಚಾಲಕರಾದ ಚಂದ್ರಕಲಾ ರಾವ್‌, ದುರ್ಗಾ ಪ್ರಸಾದ್‌ ಮತ್ತಿತರರಿದ್ದರು.

ಸನ್ನಿಧಿ ಸ್ವಾಗತಿಸಿದರು. ದಿಯಾ ಪರಿಚಯಿಸಿದರು. ರಾಹುಲ್‌ ಶೆಟ್ಟಿ ವಂದಿಸಿದರು. ಮೇಘಶ್ರೀ ನಿರೂಪಿಸಿದರು.

ಬಳಿಕ ವಿವಿಧ ಗೋಷ್ಠಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ರಕ್ತದಾನ ಶಿಬಿರ ಉದ್ಘಾಟನೆ
ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ