ಎನ್‌ಇಪಿ ಜಾರಿಯಾದರೆ ವಿದ್ಯಾರ್ಥಿಗಳಿಗೆ ಅನುಕೂಲ

KannadaprabhaNewsNetwork | Published : Dec 10, 2023 1:30 AM

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕೆಲವು ತಪ್ಪು ಕಲ್ಪನೆಯಿಂದ ಗೊಂದಲ ಸೃಷ್ಟಿಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ.

ಹೊನ್ನಾವರ:

ಜಗತ್ತು ವೇಗವಾಗಿ ಮುಂದುವರಿಯುತ್ತಿದ್ದು ಭಾರತೀಯ ಯುವಕರು ಇದಕ್ಕೆ ಸರಿಸಮಾನವಾಗಿ ಸ್ಪರ್ಧಿಸಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪರವಾಗಿ ವಿದ್ಯಾರ್ಥಿಗಳಲ್ಲಿ ಕೋಟಿ ಸಹಿ ಸಂಗ್ರಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್‌ಇಪಿ ವಿರೋಧಿಸಿದ್ದು ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ನ. 15ರಿಂದ ಡಿ. 15ರ ವರೆಗೆ ಕೋಟಿ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿದೆ‌ ಎಂದರು‌.ರಾಜ್ಯ ಶಿಕ್ಷಣ ನೀತಿ ಗೊಂದಲದ ಗೂಡಾಗಿದೆ. ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಗುಮಾಸ್ತನನ್ನು ಸಿದ್ಧಪಡಿಸುವಷ್ಟು ಮಾತ್ರ ಇದೆ. ವಿದ್ಯಾರ್ಥಿಗಳಿಗೆ ಕೌಶಲ್ಯಭರಿತ ಶಿಕ್ಷಣದ ಅಗತ್ಯತೆ ಇದ್ದು, ಅದನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಜಾರಿಯಾಗಲಿದೆ. ಎನ್‌ಇಪಿ‌ ರಾಜಕೀಯ ಕನ್ನಡಕವನ್ನು ಹಾಕಿಕೊಂಡು ರಾಜ್ಯ ಸರ್ಕಾರ ಶೈಕ್ಷಣಿಕ ವ್ಯವಸ್ಥೆಯನ್ನು ಗೊಂದಲದ ಗೂಡಾಗಿಸಿದೆ. ಹೊಸದಾಗಿ ತಜ್ಞರನ್ನು ನೇಮಕ ಮಾಡಿದ್ದು ಹೆಚ್ಚಿನವರು ಹೊರ ರಾಜ್ಯದವರೇ ಆಗಿದ್ದಾರೆ. ಒಂದು ಸಮುದಾಯವನ್ನು ಓಲೈಸಲು ರಾಷ್ಟ್ರೀಯ ಶೈಕ್ಷಣಿಕ ನೀತಿ ವಿರೋಧಿಸುತ್ತಿದೆ. ಸರ್ಕಾರ ಕೂಡಲೇ ಇದನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ ಈ ಅಭಿಯಾನ ಕೈಗೊಂಡಿದ್ದು, ವಿದ್ಯಾರ್ಥಿಗಳು ಸಹಿ‌ಮಾಡುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ ಬೆಂಬಲಿಸುವಂತೆ ಮನವಿ ಮಾಡಿದರು.ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕೆಲವು ತಪ್ಪು ಕಲ್ಪನೆಯಿಂದ ಗೊಂದಲ ಸೃಷ್ಟಿಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ. ಮಂತ್ರಿಯಾಗಿ, ಸಭಾಪತಿಯಾಗಿ ರಾಜ್ಯದೆಲ್ಲಡೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ ಕಾಗೇರಿ ಅವರು ಇಂದು ನಮ್ಮ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಲ್ಲಿ ಶಿಕ್ಷಣ ನೀತಿಯಿಂದಾಗುವ ಪ್ರಯೋಜನದ ಕುರಿತು ಮಾಹಿತಿ ನೀಡಿರುವುದರಿಂದ ಇನ್ನಷ್ಟು ಮಾಹಿತಿ ದೊರೆತಿದೆ ಎಂದರು.ಪ್ರಾಚಾರ್ಯ ಸಂಜೀವ ನಾಯ್ಕ, ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ಭಂಡಾರಿ, ಉಮೇಶ ನಾಯ್ಕ, ಭಾಗ್ಯ ಮೇಸ್ತ ಇದ್ದರು. ವಿದ್ಯಾರ್ಥಿಗಳು ಸಹಿ ಮಾಡುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಗೆ ಬೆಂಬಲಿಸಿದರು. ಕಾಲೇಜಿನ ವತಿಯಿಂದ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸನ್ಮಾನಿಸಲಾಯಿತು.

Share this article