ದೆಹಲಿಯಿಂದ ತಿಂಗಳೆಗೆ ಬಂದು ಯಕ್ಷಗಾನ ಕಲಿತರು !

KannadaprabhaNewsNetwork |  
Published : Jun 12, 2025, 03:30 AM ISTUpdated : Jun 12, 2025, 11:17 AM IST
11ಸುವರ್ಣ | Kannada Prabha

ಸಾರಾಂಶ

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ, ಪಶ್ಚಿಮ ಘಟ್ಟದ ತಪ್ಪಲಿನ ತಿಂಗಳೆ ಗರಡಿ ಆವರಣದಲ್ಲಿ ಬೀಡು ಬಿಟ್ಟು, ಕರಾವಳಿಯ ಶ್ರೇಷ್ಠ ಕಲೆ ಯಕ್ಷಗಾನ ಅಭ್ಯಾಸ ಮಾಡಿದ್ದಾರೆ.

 ಉಡುಪಿ : ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ, ಪಶ್ಚಿಮ ಘಟ್ಟದ ತಪ್ಪಲಿನ ತಿಂಗಳೆ ಗರಡಿ ಆವರಣದಲ್ಲಿ ಬೀಡು ಬಿಟ್ಟು, ಕರಾವಳಿಯ ಶ್ರೇಷ್ಠ ಕಲೆ ಯಕ್ಷಗಾನ ಅಭ್ಯಾಸ ಮಾಡಿದ್ದಾರೆ.

 ಒಂದು ಕಾಲದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತರಿಗೆ ಕಾದಂಬರಿ ರಚನೆಗೆ ಮಲೆನಾಡಿನ ತಪ್ಪಲು ತಿಂಗಳೆ ಗ್ರಾಮ ಪ್ರೇರಣೆ ನೀಡಿತ್ತು. ಕಾರಂತರೇ ಹೊಸ ಚೈತನ್ಯ ನೀಡಿದ ಯಕ್ಷಗಾನ ಕಲೆಯ ಕಲಿಕೆಗೆ ಇದೇ ಪ್ರದೇಶ ಈಗ ವೇದಿಕೆಯಾಗಿರುವುದು ವಿಶೇಷವಾಗಿದೆ. 

ಗುರು ಬನ್ನಂಜೆ ಸಂಜೀವ ಸುವರ್ಣ ಹಾಗೂ ಎನ್‌ಎಸ್‌ಡಿ ಸಂಸ್ಥೆಗೆ ಅವಿನಾಭಾವ ಸಂಬಂಧ. 2008ರಿಂದಲೂ ಎನ್ಎಸ್‍ಡಿಯ ದೆಹಲಿ ಕೇಂದ್ರದಿಂದ ಹಾಗೂ ಬೇರೆ ರಾಜ್ಯಗಳಲ್ಲಿ ಎನ್‌ಎಸ್‌ಡಿಯ ಶಾಖೆಗಳಿಂದ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಗೆಂದೇ ಉಡುಪಿಗೆ ಬಂದಿದ್ದಾರೆ. ಈ ಬಾರಿ ತಿಂಗಳೆ ಪ್ರತಿಷ್ಠಾನದ ವಿಕ್ರಮಾರ್ಜುನ ಹೆಗ್ಗಡೆ ಅವರ ಮುತುವರ್ಜಿಯಲ್ಲಿ ಈ ಶಿಬಿರ ಆಯೋಜನೆಯಾಗಿತ್ತು. 

ಹಿಂದೊಮ್ಮೆ ಎನ್‌ಎಸ್‌ಡಿ ತಂಡ ತಿಂಗಳೆಗೆ ಬಂದಿದ್ದಾಗ ಇಲ್ಲಿನ ಗರಡಿ, ಇಲ್ಲಿನ ಜಲಪಾತ, ಬೆಟ್ಟ, ಗದ್ದೆಯ ಪ್ರಶಾಂತ ವಾತಾವರಣಕ್ಕೆ ಮನಸೋತಿದ್ದರು. ಈ ಬಾರಿ ಮತ್ತೆ ತಿಂಗಳೆಯಲ್ಲೇ 10 ದಿನಗಳ ಶಿಬಿರ ಆಯೋಜನೆಯಾಗಿದೆ. 10 ದಿನಗಳ ಶಿಬಿರದಲ್ಲಿ ದೇಸದ ಮೂಲೆಮೂಲೆಗಳಿಂದ ಬಂದ 30 ವಿದ್ಯಾರ್ಥಿಗಳು ಸಂಗೀತ, ನೃತ್ಯ, ಅಭಿನಯ, ವೇಷಭೂಷಣಗಳ ವಿಭಿನ್ನ ಕಲೆಗೆ ಮಾರು ಹೋಗಿದ್ದಾರೆ.

 ಪ್ರಾಥಮಿಕ ಹೆಜ್ಜೆಗಾರಿಕೆ ಕಲಿತು, ಮುಂದೆ 20 ದಿನಗಳ ಪ್ರಸಂಗ ತರಬೇತಿ ಬೆಂಗಳೂರಿನಲ್ಲಿ ನಡೆಯಲಿದೆ. ಬನ್ನಂಜೆ ಸುವರ್ಣರೇ ರಾಜಧಾನಿಗೆ ತೆರಳಿ ಪ್ರಸಂಗದ ಪಾಠ ಮಾಡಲಿದ್ದಾರೆ.ಪಟ್ಟಣದ ಗದ್ದಲಗೌಜಿಯ ನಡುವೆಯಿಂದ ಬಂದ ವಿದ್ಯಾರ್ಥಿಗಳು ತಿಂಗಳೆ ಎಂಬ ಪಶ್ಚಿಮಘಟ್ಟದ ತಪ್ಪಲಿನ ಚುಮುಚುಮು ಚಳಿಯ ಪ್ರಶಾಂತತೆಗೆ ವಿಭಿನ್ನ ಆನಂದಾನುಭುತಿ ಪಡೆದು, ದಿನವಿಡೀ ಬಿಡುವಿಲ್ಲದೇ ದಣಿವಿಲ್ಲದೆ ಹೆಜ್ಜೆ ಕಲಿತಿದ್ದಾರೆ.

 ನಗರ ಜೀವನದಿಂದ ಹೊರತಾದ ಜೀವನ ಪದ್ಧತಿಯಿಂದ ಖುಷಿಯಾಗಿದ್ದಾರೆ. ಇದುವರೆಗೆ ಯಕ್ಷಗಾನವೆಂದರೇನೆಂದೇ ಗೊತ್ತಿಲ್ಲದ ಅವರು ಇದೀಗ ಯಕ್ಷಗಾನ ರಾಯಭಾರಿಗಳಾಗಿ ತಮ್ಮ ರಾಜ್ಯಕ್ಕೂ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಹುಮ್ಮಸ್ಸಿನಲ್ಲಿದ್ದಾರೆ.ಗುರು ಸುವರ್ಣರಿಗೆ ಅವರ ಶಿಷ್ಯರಾದ ಸುಮಂತ್, ಶಿಶಿರ್ ಸುವರ್ಣ ಹಾಗೂ ಮನೋಜ್ ಸಹಕರಿಸಿದ್ದಾರೆ. ಲಂಬೋದರ ಹೆಗಡೆ ಹಾಗೂ ಶ್ರೀಧರ ಹೆಗಡೆ ಹಿಮ್ಮೇಳದಲ್ಲಿ ಸಾಥ್‌ ನೀಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಯಕ್ಷಗಾನವೇ ಬೇಕೆಂತೆ...ಈ ವಿದ್ಯಾರ್ಥಿಗಳು ದೆಹಲಿ ಎನ್‌ಎಸ್‌ಡಿಯಿಂದ ಬೆಂಗಳೂರಿನಲ್ಲಿ 30 ದಿನಗಳ ತರಬೇತಿಗೆಂದು ಬಂದಿದ್ದರು, ಅವರಿಗೆ 10 ದಿನ ಯಕ್ಷಗಾನದ ತರಬೇತಿಗೆಂದು ಇಲ್ಲಿ ಕರೆತರಲಾಗಿತ್ತು, ಈಗ ಅವರು ತಾವು ಯಕ್ಷಗಾನ ಪ್ರಸಂಗವನ್ನೇ ಅಭ್ಯಾಸ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ಹಾಗಾಗಿ ನಮ್ಮ ತಂಡ ಬೆಂಗಳೂರಿಗೆ ತೆರಳಿ ಮುಂದಿನ 20 ದಿನಗಳ ಕಾಲ ಇವರಿಗೆ ಯಕ್ಷಗಾನ ಪ್ರಸಂಗ ಕಲಿಸಿಕೊಡಲಿದ್ದೇನೆ.

-ಸಂಜೀವ ಸುವರ್ಣ, ಯಕ್ಷಗಾನ ಗುರು

ಯಕ್ಷಗಾನ ಸಮನ್ವಯತೆ ಕಲಿಸಿದೆ...

ಇಲ್ಲಿನ ಪ್ರಾಕೃತಿಕ ವಾತಾವರಣದಲ್ಲಿ ಕಲಿಯುತ್ತಿರುವುದೇ ನನಗೆ ಒಂದು ರೋಮಾಂಚಕ ಅನುಭವ. ದೇಹ ಮತ್ತು ಮನಸ್ಸಿನ ಸಮನ್ವಯತೆ ಸಾಧಿಸುವುದು ಹೇಗೆ ಎಂದು ಯಕ್ಷಗಾನ ಕಲಿಸಿದೆ. ಇಂದಿನ ಕಲಾವಿದರಿಗೆ ನಿಜವಾಗಿ ಇಂತಹ ತರಬೇತಿ ಸಿಗಬೇಕು, ಇಲ್ಲದಿದ್ದಲ್ಲಿ ತರಬೇತಿ ಅಪೂರ್ಣ

-ಚಂದ್ರಿಕಾ, ಜೈಪುರ, ರಾಜಸ್ಥಾನ

ಯಕ್ಷಗಾನದಿಂದ ಭ್ರಮೆ ಕಳಚುತ್ತಿದೆ...ನಮಗೆ ಯಕ್ಷಗಾನದಿಂದ ಲಯ ಮತ್ತು ತಾಳದ ಅನುಭೂತಿಯಾಗಿದೆ. ಹೊಸ ಸಾಧನೆ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿರುವ ಆಧುನಿಕ ನಟ ನಟಿಯರಿಗೆ, ನಮ್ಮ ಪೂರ್ವಜರು ಯಾವತ್ತೋ ಇದನ್ನೆಲ್ಲಾ ಮಾಡಿ ಮುಗಿಸಿದ್ದಾರೆ ಎಂಬ ಸತ್ಯದ ಅರಿವಾಗುತ್ತಿದೆ.

-ವಿವೇಕ್, ಎನ್‌ಎನ್‌ಡಿ ಶಿಕ್ಷಕರು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ