ಬಿಜಿಕೆರೆ ಬಸವರಾಜ
ಗ್ರಾಮೀಣ ಭಾಗದಲ್ಲಿ ತಲೆ ಎತ್ತಿ ದಶಕದಿಂದ ತಾಲೂಕಿನ ಬಡ ಮಕ್ಕಳಿಗೆ ಅಕ್ಷರ ದಾರೆ ಎರೆಯುತ್ತಿರುವ ಆದರ್ಶ ವಿದ್ಯಾಲಯ ದಾಖಲೆ ಪ್ರಕಾರ ನಗರಪ್ರದೇಶ ವ್ಯಾಪ್ತಿಗೆ ಒಳಪಟ್ಟಿರುವ ಪರಿಣಾಮ ಇಲ್ಲಿ ಕಲಿತ ವಿದ್ಯಾರ್ಥಿಗಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲ.
ಅಧಿಕಾರಿಗಳು ಈ ಯಡವಟ್ಟಿನಿಂದ ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಗ್ರಾಮೀಣ ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.ದಶಕದ ಹಿಂದೆ ಸರ್ಕಾರ ತಾಲೂಕಿಗೆ ಇಂಗ್ಲಿಷ್ ಮಾಧ್ಯಮದ ಆದರ್ಶ ವಿದ್ಯಾಲಯ ಮಂಜೂರು ಮಾಡಲಾಗಿತ್ತು. ಇದನ್ನು ತಾಲೂಕಿನ ಹಾನಗಲ್ ಸಮೀಪದಲ್ಲಿ ನಿರ್ಮಾಣ ಮಾಡಲಾಗಿದೆ. ಶಾಲೆಯು ಗ್ರಾಮೀಣ ವ್ಯಾಪ್ತಿಯಲ್ಲಿ ತಲೆ ಎತ್ತಿದರೂ ಕಡತದಲ್ಲಿ ಮೊಳಕಾಲ್ಮೂರು ಎಂದು ನಮೂದಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಇಲ್ಲಿ ಕಲಿತ ಮಕ್ಕಳು ಗ್ರಾಮಿಣ ಕೃಪಾಂಕದ ಮೀಸಲಾತಿ ವ್ಯಾಪ್ತಿಗೆ ಒಳಪಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇಂದಿಗೂ ಸಮಸ್ಯೆ ಸರಿಪಡಿಸುವತ್ತ ಮುಂದಾಗದ ಪರಿಣಾಮ ನೂರಾರು ವಿದ್ಯಾರ್ಥಿಗಳಿಗೆ ಈ ಸೌಲಭ್ಯದಿಂದ ಅನ್ಯಾಯವಾಗಿದೆ.
ಆದರ್ಶ ವಿದ್ಯಾಲಯಕ್ಕೆ ಅಂಟಿಕೊಂಡಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಇದು ಕೂಡ ಸೂಲೆನಹಳ್ಳಿ ವ್ಯಾಪ್ತಿಗೆ ಬರಲಿದೆ. ಎರಡು ಶಾಲೆಗಳು ಅಕ್ಕಪಕ್ಕದಲ್ಲಿ ಇದ್ದರೂ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಗ್ರಾಮೀಣ ಕೃಪಾಂಕದ ಮೀಸಲಾತಿಯ ಸೌಲಬ್ಯಕ್ಕೆ ಒಳಪಟ್ಟರೆ. ಆದರ್ಶ ಶಾಲೆಯ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ.ಆರರಿಂದ ದ್ವಿತೀಯ ಪಿಯುಸಿ ವರೆಗೆ ಇರುವ ಆದರ್ಶ ವಿದ್ಯಾಲಯಕ್ಕೆ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ಮಕ್ಕಳನ್ನು ಮಾತ್ರ ದಾಖಲು ಮಾಡಿಕೊಳ್ಳಲಾಗುತ್ತದೆ. ಬಹುತೇಕ ಗ್ರಾಮೀಣ ಭಾಗದ ಬಡ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದಾರೆ. ಇಂತಹ ಶಾಲೆಯನ್ನು ಅಧಿಕಾರಿಗಳ ಹೊಣೆಗೇಡಿತನಕ್ಕೆ ಗ್ರಾಮೀಣ ಭಾಗದಲ್ಲಿದ್ದರೂ ಇಂದಿಗೂ ನಗರ ಪ್ರದೇಶ ಎಂಬುದಾಗಿ ಇರುವುದೇ ಸಮಸ್ಯೆಗೆ ಇಂಬು ನೀಡಿದೆ.
1ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ಕಲಿತಿದ್ದರೆ ಅಂತಹ ಮಕ್ಕಳು ಉನ್ನತ ವ್ಯಾಸಂಗ ಮತ್ತು ಉದ್ಯೋಗದಲ್ಲಿಗ್ರಾಮೀಣ ಕೃಪಾಂಕದ ಮೀಸಲಾತಿಗೆ ಅರ್ಹತೆ ಹೊಂದುತ್ತಾರೆ. ಈಗಿದ್ದರೂ ಅಧಿಕಾರಿಗಳು ಮಾಡಿದ ತಪ್ಪಿಗೆ ಕಳೆದ ಹತ್ತು ವರ್ಷಗಳಿಂದ ಆ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲು ತೊಡಕಾಗಿದ್ದರೂ ಸಂಬಂಧಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಶಾಲೆಯಲ್ಲಿ 6 ರಿಂದ 10ನೇ ತರಗತಿಯವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಾರೆ. ಪ್ರತಿ ವರ್ಷ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು 10ನೇ ತರಗತಿ ತೇರ್ಗಡೆಯಾಗಿ ಹೊರಹೋಗುತ್ತಾರೆ. ಶಾಲೆಯು ಗ್ರಾಮೀಣ ಭಾಗದಲ್ಲಿ ಇದೆಯಾದರೂ ದಾಖಲೆ ಪ್ರಕಾರ ನಗರ ವ್ಯಾಪ್ತಿಯಲ್ಲಿದೆ. ಇದರಿಂದಾಗಿ ಅಲ್ಲಿ ಕಲಿತ ಮಕ್ಕಳು ಉನ್ನತ ವ್ಯಾಸಂಗದಲ್ಲಿ ಗ್ರಾಮೀಣ ಮೀಸಲಾತಿಯಿಂದ ಹೊರಗುಳಿಯುವಂತಾಗಿದೆ.ಮೊದಲೇ ಹಿಂದುಳಿದ ಗಡಿ ಪ್ರದೇಶ ಶಿಕ್ಷಣಿಕವಾಗಿ ಹಿಂದುಳಿದ ತಾಲೂಕು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಅಲ್ಪ ಸಂಖ್ಯಾತ ಸಮುದಾಯದ ಬಡ ಮಕ್ಕಳೇ ಹೆಚ್ಚು ಕಲಿಯುತ್ತಿರುವ ಆದರ್ಶ ವಿದ್ಯಾಲಯ ಗ್ರಾಮೀಣ ಪ್ರದೇಶದಲ್ಲಿ ಇದ್ದರೂ ನಗರ ವ್ಯಾಪ್ತಿ ಎಂಬುದನ್ನು ಕಡತದಿಂದ ಹೊರ ತೆಗೆದಿಲ್ಲ. ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಗಿರುವ ಯಡವಟ್ಟು ಸರಿಪಡಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಅತ್ಯಗತ್ಯ ಮತ್ತು ತುಂಬಾ ಸಹಕಾರಿಯಾದ ದಾಖಲೆ. ಉನ್ನತ ವ್ಯಾಸಂಗ ಪ್ರವೇಶಕ್ಕೆ ಮತ್ತು ಸರ್ಕಾರಿ ಉದ್ಯೋ ಹೊಂದಲು ಅತಿ ಮುಖ್ಯವಾಗುತ್ತದೆ. ಅಧಿಕಾರಿಗಳು ಮಾಡಿದ ಯಡವಟ್ಟಿಗೆ ನೂರಾರು ಬಡ ಮಕ್ಕಳು ಗ್ರಾಮೀಣ ಮೀಸಲಾತಿ ಅನುಕೂಲ ಪಡೆಕೊಳ್ಳಲು ಆಗುತ್ತಿಲ್ಲ.ಮೇಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಆಗಿರುವ ಗೊಂದಲ ಸರಿಪಡಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕು
-ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ರಾಜ್ಯ ರೈತ ಸಂಘದ ಕಾರ್ಯದ್ಯಕ್ಷಪಂಚಾಯಿತಿ ವ್ಯಾಪ್ತಿಯಲ್ಲಿರುವ ಆದರ್ಶ ಶಾಲೆಯನ್ನು ನಗರ ಪ್ರದೇಶ ಎಂದು ನಮೂದು ಮಾಡಿರುವ ಪರಿಣಾಮ ತಾಲೂಕಿನ ನೂರಾರು ವಿದ್ಯಾರ್ಥಿಗಳು. ಗ್ರಾಮೀಣ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಆಗಿರುವ ಗೊಂದಲ ಸರಿಪಡಿಸಿ ಕಲಿಯುತ್ತಿರುವ ಬಡ ಮಕ್ಕಳಿಗೆ ನ್ಯಾಯ ಒದಗಿಸಬೇಕು.
-ಸ್ವಪ್ನ ಶ್ರೀನಿವಾಸ, ಅಧ್ಯಕ್ಷೆ ಹಾನಗಲ್ ಗ್ರಾಪಂ