ಗಜೇಂದ್ರಗಡ: ದೇಶದ ಅಮೂಲ್ಯ ಸಂಪತ್ತಾಗಿರುವ ವಿದ್ಯಾರ್ಥಿ ಸಮೂಹಕ್ಕೆ ದೇಶದ ಪಥವನ್ನು ಬದಲಾಯಿಸುವ ಶಕ್ತಿಯಿದೆ. ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಬದುಕಿನ ಯಶಸ್ಸಿನ ದಾರಿಯನ್ನು ಸರಳವಾಗಿಸಿಕೊಳ್ಳಬೇಕು ಎಂದು ಕರ್ನಾಟಕ ಜನಪರ ಸೇವಾ ಸಮಿತಿ ಅಧ್ಯಕ್ಷ ಗಣೇಶ ಗುಗಲೋತ್ತರ ಹೇಳಿದರು.
ಸಮೀಪದ ರಾಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ದೊಡ್ಡ ಪರೀಕ್ಷೆಯಾಗಿದೆ. ನಿರಂತರ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಾಧನೆಯು ಸಹ ಅಷ್ಟೇ ದೊಡ್ಡದಾಗಿರುತ್ತದೆ ಎಂದ ಅವರು, ಪರೀಕ್ಷಾ ತಯಾರಿಯಲ್ಲಿ ಆರೋಗ್ಯ ಮುಖ್ಯ ಪಾತ್ರವನ್ನು ವಹಿಸುವುದರಿಂದ ನಿರಂತರವಾಗಿ ನಿದ್ದೆಗೆಟ್ಟು ಓದುವ ಅಧ್ಯಯನವು ಜೀರ್ಣವಾಗುವುದಿಲ್ಲ. ಹೀಗಾಗಿ ಕ್ರಮಬದ್ಧ ಅಧ್ಯಯನಕ್ಕೆ ಮುಂದಾದಾಗ ಮಾತ್ರ ಯಶಸ್ಸು ಸುಲಭವಾಗಲಿದೆ ಎಂದರು.ಉಪನ್ಯಾಸಕ ಬಿ.ಕೆ. ಮಾದಿ ಮಾತನಾಡಿ, ನೆರೆಹೊರೆಯವರಿಗೆ ಸಹಾಯ ಮಾಡಲು ಮೀನಮೇಷ ಮಾಡುವ ದಿನಮಾನದಲ್ಲಿ ನಾವಿದ್ದೇವೆ. ಆದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆಗಾಗಿ ಪತ್ರಿಕೆಯನ್ನು ಉಚಿತವಾಗಿ ಪೂರೈಸುತ್ತಿರುವ ಶಿಕ್ಷಣ ಪ್ರೇಮಿಗಳ ನಡೆ ಅನುಕರಣೀಯ. ಹೀಗಾಗಿ ವಿದ್ಯಾರ್ಥಿಗಳು ಯುವ ಆವೃತ್ತಿ ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದರು.ಗ್ರಾಪಂ ಸದಸ್ಯ ಶಿವರಾಜಗೌಡ ಗೌಡರ ಮಾತನಾಡಿ, ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರಲಿ ಎಂಬ ಆಶಯದಿಂದ ಶಿಕ್ಷಣಪ್ರೇಮಿಗಳು ನಿಮಗೆ ಯುವ ಆವೃತಿಯನ್ನು ಉಚಿತವಾಗಿ ನೀಡಿದ್ದಾರೆ. ಹೀಗಾಗಿ ಅವರ ಕಾರ್ಯಕ್ಕೆ ನಿಮ್ಮ ಫಲಿತಾಂಶವೇ ಕಾಣಿಕೆಯಾಗಿರಲಿ ಎಂದರು.ಮುಖ್ಯೋಪಾಧ್ಯಾಯಿನಿ ಎಸ್.ಎಚ್. ಬಂಡಿವಡ್ಡರ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯಕ್ತವಾಗಿರುವ ಕ್ರೀಡೆ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನದ ಜತೆಗೆ ಎಸ್.ಎಸ್.ಎಲ್.ಸಿ. ಪಠ್ಯದ ಮಾಹಿತಿಯನ್ನು ಯುವ ಆವೃತ್ತಿಯು ಒಳಗೊಂಡಿರುವುದರಿಂದ ಇದೊಂದು ಸಂಗ್ರಹಯೋಗ್ಯವಾದ ಪತ್ರಿಕೆಯಾಗಿದೆ ಎಂದರು. ಗ್ರಾಪಂ ಸದಸ್ಯ ಶಿವರಾಜಗೌಡ ಗೌಡರ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಗೌಡ ಗೌಡರ, ಎಸ್‌ಡಿಎಂಸಿ ಸದಸ್ಯ ರಂಜಾನಸಾಬ್ ಮ್ಯಾಗೇರಿ, ಕನ್ನಡಪ್ರಭ ವರದಿಗಾರ ಎಸ್.ಎಂ. ಸೈಯದ್, ಶಿಕ್ಷಕರಾದ ಎಸ್.ಎಚ್. ಪೂಜಾರ, ಎಂ.ಆರ್. ಹವಾಲ್ದಾರ್, ಕೆ.ಟಿ. ರಾಠೋಡ, ಎಸ್.ಎಂ. ನಾಗರಾಳ, ಎಂ.ಎಸ್. ಸುರಪುರ, ಎಸ್.ಐ. ಹಾದಿಮನಿ ಇತರರು ಇದ್ದರು.