ಬೆಳ್ತಂಗಡಿ: ಇಂದು ತಂತ್ರಜ್ಞಾನಗಳು ನಮ್ಮನ್ನು ನಿಯಂತ್ರಿಸುವ ಕಾಲವಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಸ್ವಂತಿಕೆಯ ಪ್ರತಿಭೆ ಮತ್ತು ಕ್ರಿಯಾ ಶೀಲತೆ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕಿರುವ ಬಹುದೊಡ್ಡ ವೇದಿಕೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇದು ಅತ್ಯಗತ್ಯ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ ಅಭಿಪ್ರಾಯ ಪಟ್ಟರು.
ಇವರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪ್ರತಿಯೊಬ್ಬರು ಬಾಲ್ಯದ ಶಾಲಾ ದಿನಗಳನ್ನು ನೆನಪಿಸುತ್ತದೆ. ಸ್ಪರ್ಧಾಳುಗಳಿಗೆ ಹೊಸ ಅನುಭವವನ್ನು ನೀಡುತ್ತದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊದಲು ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಇದು ವಿದ್ಯಾರ್ಥಿಗಳಲ್ಲಿ ಟೀಂ ವರ್ಕ್, ಸಾಮೂಹಿಕ ಸಂವಹನ ಮತ್ತು ಮನೋಧೈರ್ಯವನ್ನು ಬೆಳೆಸುತ್ತಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿದರು, ಶಿಕ್ಷಕಿ ಚೇತನಾಕ್ಷಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಸೋತರೆ ಚಿಂತಿಸಬೇಡಿ ನಾವೆಲ್ಲ ಸೋತು ಗೆಲ್ಲೋಣ ಎಂದು ಹುರಿದುಂಬಿಸಿದರು.ಕಾರ್ಯಕ್ರಮದಲ್ಲಿ 10 ಜನ ವಿವಿಧ ಕ್ಲಸ್ಟರ್ ಭಾಗಗಳ ಸಿ.ಆರ್.ಪಿ ಶಿಕ್ಷಕರು ಗಳಿಗೆ ಉದ್ಘಾಟಕರಿಂದ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಬಳಿಕ ಅತಿಥಿಗಳಿಂದ ವಿದ್ಯಾರ್ಥಿಗಳು ವಿನೂತನವಾಗಿ ರಚಿಸಿದ ಪ್ರತಿಭಾ ಕಾರಂಜಿ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಸರಕಾರಿ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷ ಜಯರಾಜ್, ಜಿಲ್ಲಾ ಕಾರ್ಯದರ್ಶಿ ಅಮಿತ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ವಾರಿಜಾ ಮತ್ತು ಶಿಕ್ಷಕ ಶ್ರೇಯಾಂಶು ನಿರೂಪಿಸಿ , ಹಿರಿಯ ಶಿಕ್ಷಕ ಬಸವಲಿಂಗಪ್ಪ ವಂದಿಸಿದರು.--------------------------------ದೇಶಿಯ ಸಂಸ್ಕೃತಿ, ಸೃಜನ ಶೀಲತೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ದೃಷ್ಟಿಯಿಂದ ಪ್ರತಿ ವಲಯ, ತಾಲೂಕುಗಳಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಎಲ್ಲಾ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸುವುದು. ಇದು ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವುದರ ಜೊತೆಗೆ ಭವಿಷ್ಯದಲ್ಲಿ ಪ್ರತಿಭಾವಂತರಾಗಿ ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಸಮೂಹದಲ್ಲಿ ಹೊಸ ಕನಸುಗಳನ್ನು ಚಿಗುರಿ ಸುತ್ತಿದೆ.। ಪೂರನ್ ವರ್ಮ, ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತದ, ಸಿಇಒ