ವಿದ್ಯಾರ್ಥಿಗಳು ಸದೃಡ ಸಮಾಜ ನಿರ್ಮಿಸಲು ಸನ್ನದ್ಧರಾಗಿ: ಡಾ.ಪಿ.ಪರಮಶಿವಯ್ಯ ಸಲಹೆ

KannadaprabhaNewsNetwork |  
Published : May 15, 2024, 01:34 AM IST
ಹಣಗಳಿಸುವ ಉದ್ಯೋಗಕ್ಕೆ ಸೀಮಿತವಾಗದೆ ಸದೃಡ ಸಮಾಜ ನಿರ್ಮಿಸಿ : ಡಾ. ಪಿ. ಪರಮಶಿವಯ್ಯ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವ ಬಗ್ಗೆ ತುಂಬಾ ಆಸಕ್ತಿ ವಹಿಸಬೇಕು. ಈ ನಿಟ್ಟಿನಲ್ಲಿ ಕೆಐಟಿಯ ಬೋಧಕ ಮತ್ತು ಬೋಧಕೇತರರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಹಗಲು ರಾತ್ರಿ ಎನ್ನದೇ ಪರಿಪೂರ್ಣ ಸಹಕಾರ ನೀಡಲು ಸದಾ ಸನ್ನದ್ಧರಾಗಿರುತ್ತಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ಕೌಶಲ್ಯಗಳನ್ನು ನವೀಕರಿಸಿಕೊಳ್ಳುವ ಮೂಲಕ ಉತ್ತಮ ಗುರಿ ಹೊಂದಿ ಸದೃಡ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಡೀನ್ ಮತ್ತು ಫೈನಾನ್ಸ್ ಆಫೀಸರ್ ಡಾ.ಪಿ.ಪರಮಶಿವಯ್ಯ ತಿಳಿಸಿದರು.

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿಭಾಗದಿಂದ 2021 ರಿಂದ 2023ರವರೆಗಿನ ಶೈಕ್ಷಣಿಕ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ‘ಗ್ರಾಜುಯೇಷನ್ ಡೇ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಬಿಎ ಪದವಿಯ ನಂತರ ಬಹಳಷ್ಟು ಉದ್ಯೋಗವಕಾಶಗಳಿದ್ದು ವಿದ್ಯಾರ್ಥಿಗಳು ತಮ್ಮ ಧ್ಯೇಯವನ್ನು ಕೇವಲ ಅಂಕ ಗಳಿಸುವುದಕ್ಕೆ ಮೀಸಲಿಡದೇ ವಿವಿಧ ಕೌಶಲ್ಯಗಳನ್ನು ಕಲಿತು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪರಿಶ್ರಮಕ್ಕೆ ಇನ್ನಾವುದೇ ಪರ್ಯಾಯ ಮಾರ್ಗವೆಂಬುದು ಇರುವುದಿಲ್ಲ. ತಮ್ಮ ಸಾರ್ಥಕ ಸೇವೆಯು ಅನುಕೂಲಕರವಾಗಿರುವಂತೆ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ತಮ್ಮ ಕೊಡುಗೆ ಏನೆಂದು ಅರಿತು ಮುನ್ನಡೆಯಬೇಕು. ವಿದ್ಯಾರ್ಥಿಗಳು ಉದ್ಯೋಗವಕಾಶಗಳಿಗಾಗಿ ಕಾಯುವ ಬದಲು ಕೃಷಿತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮಿಂದ ತಾವೇ ಪ್ರಗತಿ ಹೊಂದುವ ಬಗ್ಗೆ ಚಿಂತನೆ ನಡೆಸಬೇಕು. ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್‌ಸಿಂಗ್‌ರವರು ಭಾರತದ ಪ್ರಧಾನಿಯಾದ ಅವಧಿಯಲ್ಲಿ ಭಾರತದಲ್ಲಿ ಆರ್ಥಿಕ ಉದಾರೀಕರಣಕ್ಕೆ ಮುನ್ನುಡಿ ಬರೆದರು. ವಿದೇಶಿ ಹೂಡಿಕೆಗೆ ತೆರೆದುಕೊಳ್ಳುವಿಕೆ, ಬಂಡವಾಳ ಮಾರುಕಟ್ಟೆಗಳನ್ನು ಸುಧಾರಿಸುವುದು, ದೇಶಿಯ ವ್ಯಾಪಾರದ ನಿಯಂತ್ರಣಕ್ಕೆ ನೀತಿಗಳನ್ನು ಹೊರತಂದರು. ಹಣವನ್ನು ನೀರಿನಂತೆ ಸಂಗ್ರಹಿಸಬೇಕು, ತೀರ್ಥದಂತೆ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹಣಗಳಿಸುವುದೊಂದೇ ಗುರಿಯಾಗಬಾರದು. ಕಠಿಣ ಪರಿಶ್ರಮದಿಂದ ತಮ್ಮ ಜೀವನದಲ್ಲಿ ಬರುವ ಅಡೆ ತಡೆಗಳನ್ನು ಎದುರಿಸಿ ಮುನ್ನಡೆದು ಸಾರ್ಥಕ ಜೀವನವನ್ನು ಪರಿಪೂರ್ಣಗೊಳಿಸಬೇಕೆಂದು ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ, ಡಾ.ಪರಮಶಿವಯ್ಯನವರು ಮಾಡಿರುವ ಸಾಧನೆ ಅಪಾರವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯಲು ಇವರ ಪರಿಶ್ರಮ ಅಪಾರವಾಗಿದೆ, ಇವರ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಕೆ.ಐ.ಟಿ ಪ್ರಾಂಶುಪಾಲರು ಡಾ.ಜಿ.ಡಿ. ಗುರುಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವ ಬಗ್ಗೆ ತುಂಬಾ ಆಸಕ್ತಿ ವಹಿಸಬೇಕು. ಈ ನಿಟ್ಟಿನಲ್ಲಿ ಕೆಐಟಿಯ ಬೋಧಕ ಮತ್ತು ಬೋಧಕೇತರರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಹಗಲು ರಾತ್ರಿ ಎನ್ನದೇ ಪರಿಪೂರ್ಣ ಸಹಕಾರ ನೀಡಲು ಸದಾ ಸನ್ನದ್ಧರಾಗಿರುತ್ತಾರೆ ಎಂದರು.

ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ದೀಪ್ತಿ ಅಮಿತ್ ಮಾತನಾಡಿ, ವಿಭಾಗದ ವಿದ್ಯಾರ್ಥಿಗಳ ಸತತ ಪರಿಶ್ರಮ, ಸಾಧನೆಯ ಬಗ್ಗೆ ಮತ್ತು ಅವರಿಗೆ ಯಾವ ಮಾನದಂಡಗಳ ಮೇಲೆ ಉದ್ಯೋಗವಕಾಶಗಳು ತ್ವರಿತವಾಗಿ ದೊರೆಯಲಿವೆ ಎಂಬ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯದರ್ಶಿಗಳಾದ ಎಂ.ಆರ್.ಸಂಗಮೇಶ್, ಜಿ.ಎಸ್. ಉಮಾಶಂಕರ್,ಉಪಾಧ್ಯಕ್ಷ ಜಿ.ಪಿ. ದೀಪಕ್, ವಿಭಾಗದ ಶೇಖರಗೌಡ ಮಾತನಾಡಿದರು.

ಕಾರ್ಯಕ್ರಮವನ್ನು ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?