ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಲೇಜು ಆರಂಭವಾಗಿ ಮೂರು ತಿಂಗಳು ಕಳೆದರೂ ಇನ್ನೂ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳದಿರುವುದರಿಂದ ತರಗತಿಗಳು ನಡೆಯದ ಕಾರಣ ಸೋಮವಾರ ಸಹ್ಯಾದ್ರಿ ಕಾಲೇಜು ಮುಂಭಾಗ ಬಿ.ಎಚ್.ರಸ್ತೆಯಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಕುವೆಂಪು ವಿವಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸೆಪ್ಟಂಬರ್‌ನಲ್ಲಿ ಶೈಕ್ಷಣಿಕ ವರ್ಷ ಆರಂಭವಾದರು ತರಗತಿಗಳು ನಡೆಯುತ್ತಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಿಸದೆ ಇರುವುದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರು ಕೊಟ್ಟ ಮಾತು ತಪ್ಪಿದ್ದಾರೆ. ಇದರಿಂದ ತರಗತಿಗಳು ನಡೆಯದೆ ತಮ್ಮ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತಿದೆ ಎಂದು ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟಿಸಿದರು. ಅಧ್ಯಾಪಕರು ಮೌಲ್ಯಮಾಪನ ಕಾರ್ಯಕ್ಕೆ ತೆರಳಿದ್ದಾರೆ. ದಸರಾ, ದೀಪಾವಳಿ ಹಬ್ಬದ ನಂತರ ತರಗತಿ ಪ್ರಾರಂಭಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದರು. ಆದರೆ ಈಗ ಅತಿಥಿ ಉಪನ್ಯಾಸಕರ ನೇಮಕವಾದ ನಂತರ ತರಗತಿ ಪ್ರಾರಂಭವಾಗುತ್ತವೆ ಎನ್ನುತ್ತಿದ್ದಾರೆ. ಇದರಿಂದ ಅಧ್ಯಯನದಲ್ಲಿ ಹಿಂದುಳಿಯುವ ಭಯ ಕಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಕೆಲವು ಅತಿಥಿ ಉಪನ್ಯಾಸಕರು ಮಾನವೀಯ ಹಿನ್ನೆಲೆಯಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಅವರೂ ನಮಗೆ ನೇಮಕಾತಿ ಆದೇಶ ದೊರೆತಿಲ್ಲ. ಪ್ರಾಂಶುಪಾಲರನ್ನು ಕೇಳಿ ಎನ್ನುತ್ತಿದ್ದಾರೆ. ಖಾಯಂ ಅಧ್ಯಾಪಕರು ಮೌಲ್ಯಮಾಪನಕ್ಕೆ ಹೋಗಿದ್ದೆವು ಎನ್ನುತ್ತಾರೆ. ಕಳೆದ ವಾರ ಇದೆ ವಿಚಾರವಾಗಿ ಪ್ರತಿಭಟನೆ ನಡೆಸಲಾಗಿತ್ತು. ಆಗ ಶನಿವಾರದ ಒಳಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತದೆ ಎಂದು ಕುವೆಂಪು ವಿವಿ ಆಡಳಿತ ಭರವಸೆ ನೀಡಿತ್ತು. ಈಗ ಮಾತು ತಪ್ಪಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದ್ದರಿಂದ ಬಿ.ಎಚ್.ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೆಲವೆ ಕ್ಷಣದಲ್ಲಿ ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು. ರಸ್ತೆ ತಡೆ ನಡೆಸದಂತೆ ಪೊಲೀಸರು ಮನವೊಲಿಸಿದ್ದರಿಂದ ವಿದ್ಯಾರ್ಥಿಗಳು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
- - - -27ಎಸ್‌ಎಂಜಿಕೆಪಿ05:ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ತರಗತಿಗಳು ನಡೆಯದ ಕಾರಣ ಮುಂಭಾಗ ಬಿ.ಎಚ್. ರಸ್ತೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.