ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Jul 25, 2024, 01:22 AM IST
24ಸಿಎಚ್‌ಎನ್‌51ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ವಿವೇಕಾನಂದ ಗಿರಿಜನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಏಕಾಏಕಿ ಕಾಲೇಜನ್ನು ಮುಚ್ಚಲು ಮುಂದಾಗಿರುವ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ವಿವೇಕಾನಂದ ಗಿರಿಜನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾಲೇಜನ್ನು ಮುಚ್ಚಲು ಮುಂದಾಗಿರುವ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿರುವ ವಿವೇಕಾನಂದ ಗಿರಿಜನ ಪದವಿ ಪೂರ್ವ ಕಾಲೇಜನ್ನು ಏಕಾಏಕಿ ಮುಚ್ಚಲು ಮುಂದಾಗಿರುವ ಆಡಳಿತ ಮಂಡಳಿಯ ನಡೆಯನ್ನು ಖಂಡಿಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರು ಮಂಗಳವಾರ ದಿಢೀರನೆ ಪ್ರತಿಭಟನೆ ನಡೆಸಿದರು.ಈ ಕಾಲೇಜಿನಲ್ಲಿ ಪ್ರಸ್ತುತ 42 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಗಿರಿಜನ, ಸೋಲಿಗ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟದಲ್ಲಿ 1195ರಲ್ಲಿ ಆರಂಭಗೊಂಡ ಈ ಕಾಲೇಜು ನಂತರ ಉಪ್ಪಿನಮೋಳೆ ಗ್ರಾಮದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈಗ ಏಕಾಏಕಿ ಆಡಳಿತ ಮಂಡಳಿಯವರು ಕಾಲೇಜನ್ನು ಮುಚ್ಚಲು ತೀರ್ಮಾನಿಸಿರುವುದರಿಂದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಕಾಲೇಜಿನ ಹಿರಿಯ ಉಪನ್ಯಾಸಕ ದೊಡ್ಡಸುಬ್ಬಯ್ಯ ಮಾತನಾಡಿ, ಈ ಕಾಲೇಜಿನಲ್ಲಿ ನಾನು 29 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದೇನೆ. ಈಗ ನಿವೃತ್ತಿ ಹಂತದಲ್ಲಿದ್ದೇನೆ. ಅತ್ಯಂತ ಕಡಿಮೆ ಸಂಬಳದಲ್ಲಿ ನಾನು ಇಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸೇವಾ ಮನೋಭಾವನೆಯಿಂದ ನಾವು ಇಲ್ಲಿ ದುಡಿಯುತ್ತಿದ್ದೇವೆ. ಡಾ.ಸುದರ್ಶನ್ ನಮ್ಮ ಜೀವನಕ್ಕೆ ಅನುಕೂಲ ಮಾಡಿಕೊಡುತ್ತಾರೆ ಎಂಬ ನಂಬಿಕೆ ನಮ್ಮಲ್ಲಿತ್ತು. ಆದರೆ ಏಕಾಏಕಿ ಕಾಲೇಜು ಮುಚ್ಚುವ ನಿರ್ಧಾರ ಮಾಡಿರುವುದು ವಿದ್ಯಾರ್ಥಿಗಳ ಹಾಗೂ ನಮ್ಮ ಜೀವನಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದರು.

ಆಡಳಿತ ಮಂಡಳಿ ಕಾಲೇಜು ಮುಚ್ಚಲು ವಿದ್ಯಾರ್ಥಿಗಳು ಕಡಿಮೆ ಇರುವ ನೆಪವೊಡ್ಡುತ್ತಾರೆ. ಆದರೆ ಸೇವಾ ಮನೋಭಾವನೆಯಿಂದ ಈ ಕಾಲೇಜು ಆರಂಭಿಸಲಾಗಿದೆ. 30 ವಿದ್ಯಾರ್ಥಿಗಳಿದ್ದರೂ ಪರೀಕ್ಷೆ ಬರೆಯಲು ಮಾನ್ಯತೆ ನೀಡಲಾಗುತ್ತದೆ. ಆದರೆ, ಆದಾಯದ ನಿರೀಕ್ಷೆಯಲ್ಲಿ ಆಡಳಿತ ಮಂಡಳಿ ಕಾಲೇಜು ಮುಚ್ಚುವ ಕ್ರಮಕ್ಕೆ ಮುಂದಾಗಿರುವುದು ಸೂಕ್ತವಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಕಾಲೇಜನ್ನು ಮುಂದುರೆಸಬೇಕು. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದರು.ಪೋಷಕ ಮಹದೇವಶೆಟ್ಟಿ ಮಾತನಾಡಿ, ವಿಜಿಕೆಕೆ ಕೇಂದ್ರ ಸೇವಾ ಮನೋಭಾವನೆಯಿಂದ ತೆರೆಯಲಾಗಿದೆ. ಈ ಭಾಗದಲ್ಲಿ ಗಿರಿಜನರು, ಪರಿಶಿಷ್ಟಜಾತಿ, ವರ್ಗ, ಹಿಂದುಳಿದ ವರ್ಗವೇ ಹೆಚ್ಚಾಗಿದೆ. ಕಳೆದ 30 ವರ್ಷದಿಂದಲೂ ಸೇವೆ ಮಾಡುತ್ತಿದ್ದಾರೆ. ಆದರೆ, ಈಗ ಏಕಾಏಕಿ ಕಾಲೇಜು ಮುಚ್ಚುವ ನಿರ್ಣಯ ಕೈಗೊಂಡಿರುವುದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗಕ್ಕೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.ವಿಜಿಕೆಕೆ ಸಂಸ್ಥೆಯ ವ್ಯವಸ್ಥಾಪಕ ಬಸವಲಿಂಗ ಮಾತನಾಡಿ, ಈ ಬಗ್ಗೆ ಆಡಳಿತ ಮಂಡಳಿಯವರ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು. ಕಾಲೇಜನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಲಾಗುವುದು ಎಂದರು. ಕಾಲೇಜಿನ ಪ್ರಾಂಶುಪಾಲೆ ನಂದಿನಿ, ಉಪನ್ಯಾಸಕರಾದ ಎಂ.ಕುಮಾರ್, ಟಿ.ರಾಣಿ, ನಾರಾಯಣ, ಸಿಬ್ಬಂದಿ ಪ್ರಕಾಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ