ಸರ್ಕಾರಿ ಬಸ್‌ಗಳ ನಿಲ್ಲಿಸದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Jun 01, 2024, 12:45 AM IST
ನರಸಿಂಹರಾಜಪುರ ತಾಲೂಕಿನ ಬಿ.ಎಚ್‌.ಕೈಮರದಲ್ಲಿ ಕಾಲೇಜ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರ್ಕಾರಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ನರಸಿಂಹರಾಜಪುರ, ಶೃಂಗೇರಿಯಿಂದ ಶಿವಮೊಗ್ಗಕ್ಕೆ 4 ಬಸ್ಸುಗಳು ಓಡಾಡುತ್ತಿದ್ದರೂ ಕೆಲವು ಬಸ್ಸು ನಿಲ್ದಾಣಗಳಲ್ಲಿ ಸ್ಟಾಪ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸ್ಥಳೀಯರು ಬಿ.ಎಚ್.ಕೈಮರದಲ್ಲಿ ಶುಕ್ರವಾರ ಬೆಳಿಗ್ಗೆ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಕೆಲವು ಸಮಯ ತಡೆದು ಪ್ರತಿಭಟನೆ ನಡೆಸಿದರು.

ಸಾರ್ವಜನಿಕರಿಂದ ಬಿ.ಎಚ್‌.ಕೈಮರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಡೆ । ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೃಂಗೇರಿಯಿಂದ ಶಿವಮೊಗ್ಗಕ್ಕೆ 4 ಬಸ್ಸುಗಳು ಓಡಾಡುತ್ತಿದ್ದರೂ ಕೆಲವು ಬಸ್ಸು ನಿಲ್ದಾಣಗಳಲ್ಲಿ ಸ್ಟಾಪ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸ್ಥಳೀಯರು ಬಿ.ಎಚ್.ಕೈಮರದಲ್ಲಿ ಶುಕ್ರವಾರ ಬೆಳಿಗ್ಗೆ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಕೆಲವು ಸಮಯ ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಕಾಲೇಜು ವಿದ್ಯಾರ್ಥಿಗಳು ಮಾತನಾಡಿ, ಶೃಂಗೇರಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ಸುಗಳು ಕೊಪ್ಪ ಬಿಟ್ಟರೆ ಕುದುರೆಗುಂಡಿ, ಕೈಮರ, ನರಸಿಂಹರಾಜಪುರ, ಶೆಟ್ಟಿಕೊಪ್ಪ, ಮುತ್ತಿನಕೊಪ್ಪದಲ್ಲಿ ಸ್ಟಾಪ್‌ ನೀಡುತ್ತಾರೆ. ಆದರೆ, ತಲಮಕ್ಕಿ, ಗುಡ್ಡೇಹಳ್ಳ, ಚಿಟ್ಟಿಕೊಡಿಗೆ, ವಗಡೆ ಕಲ್ಲು, ಸಿಂಸೆ, ಮೆಣಸೂರು ಕಾಲೇಜು ಸ್ಛಾಪ್‌, ಸೌತಿಕೆರೆ ಮುಂತಾದ ಕಡೆಗಳಲ್ಲಿ ಕೈ ಅಡ್ಡ ಹಾಕಿದರೂ ಸ್ಟಾಪ್‌ ನೀಡುತ್ತಿಲ್ಲ. ಇದರಿಂದ ಶಾಲಾ, ಕಾಲೇಜು ಮಕ್ಕಳಿಗೆ ತೀವ್ರ ತೊಂದರೆ ಯಾಗುತ್ತಿದೆ. ಗ್ರಾಮೀಣ ಭಾಗದ ಬಸ್ಸು ನಿಲ್ದಾಣದಲ್ಲೂ ಸ್ಟಾಪ್‌ ನೀಡಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಬಸ್ ಕಲ್ಪಿಸಿ:

ಈಗ ಕೇವಲ 4 ಸರ್ಕಾರಿ ಬಸ್ಸುಗಳು ಮಾತ್ರ ಓಡಾಡುತ್ತಿದೆ. ಇನ್ನೂ 2 ರಿಂದ 3 ಹೊಸ ಬಸ್ಸುಗಳನ್ನು ಶಿವಮೊಗ್ಗ- ಶೃಂಗೇರಿ ಮಾರ್ಗದಲ್ಲಿ ಓಡಿಸಬೇಕು ಎಂದು ಒತ್ತಾಯಿಸಿದರು. 2 ತಿಂಗಳ ಹಿಂದೆ ಗ್ರಾಮೀಣ ಭಾಗದ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳ ನಿಲುಗಡೆ ಮಾಡಲಾಗುತ್ತಿತ್ತು. ಈಗ ಎಕ್ಸ್ ಪ್ರೆಸ್ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಪೊಲೀಸರ ಆಗಮನವೂ ಆಯಿತು. ಕೆಲವು ಸಮಯ ಸಾರ್ವಜನಿಕರಿಗೆ, ಬಸ್ಸು ನಿರ್ವಾಹಕರೊಂದಿಗೆ ಮಾತಿನ ಚಕಮುಖಿ ಸಹ ನಡೆಯಿತು. ಶೃಂಗೇರಿ ಕೆಎಸ್‌ಆರ್‌ಟಿಸಿ ಡಿಪೋದ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಲವು ಸಮಯದ ನಂತರ ಶೃಂಗೇರಿ ಕೆಎಸ್‌ಆರ್‌ಟಿಸಿ ಡಿಪೋ ವಿಭಾಗೀಯ ಅಧಿಕಾರಿ ಆಗಮಿಸಿದರು. ಪೊಲೀಸ್‌ ಠಾಣೆಯಲ್ಲಿ ಡಿಪೋ ಅಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಈ ದಿನ ಸಂಜೆಯಿಂದಲೇ ಸ್ಟಾಪ್‌ ನೀಡುತ್ತೇನೆ ಎಂದು ಭರವಸೆ ನೀಡಿದರು. ನಂತರ ಬಸ್ಸುಗಳನ್ನು ಬಿಡಲಾಯಿತು. ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳಾದ ಗೌತಮ್‌, ಸೋನ, ಸಿವಾನಿ, ಗೌತಮ್‌, ಸುಹಾಸ್‌, ಮನೋಜ್‌, ಮೋಕ್ಷಿತ್‌, ನಿತಿನ್, ಜಸ್ಟಿನ್‌,ಜೀಸನ್ ಮತ್ತಿತರರು ಇದ್ದರು. ಪ್ರತಿಭಟನೆಯಲ್ಲಿ ಅಭಿನವ ಪ್ರತಿಭಾ ವೇದಿಕೆ, ಕರವೇ, ಆಟೋ ಸಂಘದವರು ಪಾಲ್ಗೊಂಡಿದ್ದರು.

-- ಬಾಕ್ಸ್--

ಪ್ರಸ್ತುತ ಶಿವಮೊಗ್ಗದಿಂದ ಶೃಂಗೇರಿಗೆ ಕೇವಲ 4 ಸರ್ಕಾರಿ ಬಸ್ಸುಗಳು ಮಾತ್ರ ಓಡಾಡುತ್ತಿದೆ. ಇನ್ನೂ 4 ಬಸ್ಸುಗಳು ಓಡಾಡಬೇಕು.ಈ ಬಗ್ಗೆ ಈ ಹಿಂದೆ ಚಿಕ್ಕಮಗಳೂರು ಡಿಪೋದಲ್ಲಿ ವಿಚಾರಿಸಿದರೆ ಶಿವಮೊಗ್ಗದಲ್ಲಿ ಕೇಳಿ ಎನ್ನುತ್ತಿದ್ದಾರೆ. ಶಿವಮೊಗ್ಗ ಡಿಪೋದಲ್ಲಿ ಕೇಳಿದರೆ ಶಿಕಾರಿಪುರ ಡಿಪೋದಲ್ಲಿ ಕೇಳಿ ಎನ್ನುತ್ತಾರೆ ಎಂದು ಕಾಲೇಜು ವಿದ್ಯಾರ್ಥಿ ಗೌತಮ್ ಸುದ್ದಿಗಾರರಿಗೆ ತಿಳಿಸಿದರು.

ಇಂದು ಶಿವಮೊಗ್ಗಕ್ಕೆ ಕಾಲೇಜು ವಿದ್ಯಾರ್ಥಿಗಳ ತಂಡ ತೆರಳಿ ಅಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದ ಡಿಸಿ ಅ‍ವರಿಗೆ ಮನವಿ ಸಲ್ಲಿಸಿದ್ದು ಅವರು ಇಂದಿನಿಂದಲೇ ಗ್ರಾಮೀಣ ಭಾಗದ ಬಸ್ಸು ಸ್ಟಾಪಿನಲ್ಲಿ ಬಸ್ಸು ನಿಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ