ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

KannadaprabhaNewsNetwork |  
Published : Oct 28, 2025, 12:15 AM IST
27ಎಚ್‌ವಿಆರ್3 | Kannada Prabha

ಸಾರಾಂಶ

ಸಾರಿಗೆ ಬಸ್‌ಗಳನ್ನು ಸಕಾಲಕ್ಕೆ ಓಡಿಸುವುದು, ಅಗಡಿ ಗ್ರಾಮದ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ನಿಲುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ಅಗಡಿ ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಹಾವೇರಿ: ಸಾರಿಗೆ ಬಸ್‌ಗಳನ್ನು ಸಕಾಲಕ್ಕೆ ಓಡಿಸುವುದು, ಅಗಡಿ ಗ್ರಾಮದ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ನಿಲುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ಅಗಡಿ ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾತನಾಡಿ, ತಾಲೂಕಿನ ಪ್ರಮುಖ ಹಾಗೂ ದೊಡ್ಡ ಗ್ರಾಮವಾದ ಅಗಡಿ ಮಾರ್ಗದ ಮೂಲಕವೇ ನಿತ್ಯ ನೂರಾರು ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುತ್ತಿವೆ. ಅಲ್ಲದೇ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಇದು ಸಂಪರ್ಕ ಕೊಂಡಿಯಾಗಿದೆ. ದಿನನಿತ್ಯ ಶಾಲೆ-ಕಾಲೇಜಿಗೆಂದು 350ಕ್ಕೂ ಹೆಚ್ಚು ಮಕ್ಕಳು ಮತ್ತು ಇತರೆ ಕಾರ್ಯನಿಮಿತ್ತ ಇಷ್ಟೇ ಸಂಖ್ಯೆಯ ಜನರು ಓಡಾಡುತ್ತಾರೆ. ಆದರೆ ಅಗಡಿ ಗ್ರಾಮಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತ ಬಂದಿದ್ದರೂ ಅದು ಆರಂಭವಾಗಿಲ್ಲ ಎಂದು ದೂರಿದರು.ಇನ್ನು ಅಲ್ಲಲ್ಲಿ ಶಾಲೆ ಕಾಲೇಜಿಗೆ ತೆರಳುವ ಮಕ್ಕಳಿದ್ದರೂ ಸಹ ಬಸ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದಾಗಲೂ ಬಸ್ ನಿಲುಗಡೆ ಮಾಡದೇ ಹಾಗೆ ಓಡಾಡುತ್ತಿದ್ದು, ಹಲವು ಬಾರಿ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಮೌಖಿಕವಾಗಿ ದೂರು ಕೊಟ್ಟಿದ್ದಲ್ಲದೇ ಮನವಿಯನ್ನೂ ಮಾಡಿಕೊಂಡಿದ್ದೇವೆ. ಇನ್ನು ಚಾಲಕ, ನಿರ್ವಾಹಕ ಸಿಬ್ಬಂದಿಗಳ ವರ್ತನೆ ಅತ್ಯಂತ ಕಠಿಣವಾಗಿದ್ದು, ಬಸ್‌ಗಳ ಮಾಲೀಕರಂತೆ ವರ್ತಿಸುತ್ತಾರೆ. ಸಾರ್ವಜನಿಕ ಸೇವೆ ಎಂಬುದನ್ನು ಮರೆತು ಮನಸೋ ಇಚ್ಛೆ ನಡೆದುಕೊಳ್ಳುತ್ತಾರೆ ಎಂದು ದೂರಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವೇಳೆಗೆ ಬಸ್ ಓಡಿಸಿ ಎಂದರೆ ಮಧ್ಯಾಹ್ನ 11ಕ್ಕೆ ಖಾಲಿ ಬಸ್ ಅಗಡಿ ಬಂದು ವಾಪಸ್ ಹೋಗುತ್ತಿದೆ. ಇದೇ ಬಸ್‌ನ್ನು ಬೆಳಗ್ಗೆ 8.30ಕ್ಕೆ ಸಂಜೆ 4.30ಕ್ಕೆ ವಾಪಸ್ ಬರುವಂತೆ ವ್ಯವಸ್ಥೆ ಮಾಡುವಲ್ಲಿ ಸಾರಿಗೆ ಇಲಾಖೆ ವಿಫಲವಾಗಿದೆ. ಇನ್ನು ಗುತ್ತಲದಿಂದ ಅಗಡಿ ಮಾರ್ಗವಾಗಿ ಹಾವೇರಿಗೆ ತೆರಳುವ ಬಸ್ ಚಾಲಕ ಮತ್ತು ನಿರ್ವಾಹಕರು ಅಗಡಿ ಗ್ರಾಮದಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ದಿನನಿತ್ಯ ಶಾಲೆ ಕಾಲೇಜಿಗೆ ತೆರಳುವ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಸ್‌ನ ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳ ಜತೆ ಬಿರುಸಾಗಿ ನಡೆದುಕೊಳ್ಳುತ್ತಾರೆ, ನಿಗದಿತ ಬಸ್ ನಿಲುಗಡೆ ಸ್ಥಳದಲ್ಲಿ ನಿಲ್ಲಿಸದೇ ಎಲ್ಲೆಂದರಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಗೋಳಾಡಿಸುವುದು, ಅವಾಚ್ಯವಾಗಿ ನಿಂದಿಸುವುದು ಮಾಡುತ್ತಿದ್ದು ಅಂಥವರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.ಈ ವೇಳೆ ತೆರೆದಹಳ್ಳಿ, ಗುತ್ತಲ ಮತ್ತು ಹರಪನಹಳ್ಳಿ ಮಾರ್ಗದ ಮೂರು ಬಸ್‌ಗಳನ್ನು ಮೂರು ತಾಸಿಗೂ ಹೆಚ್ಚು ಕಾಲ ತಡೆದು ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ವಿದ್ಯಾರ್ಥಿಗಳಾದ ಬಸವರಾಜ, ಕರಬಸಪ್ಪ, ದಯಾನಂದ, ಆಕಾಶ ಪೂಜಾರ, ಮೌನೇಶ, ರಾಜು ಕಟ್ಟೀಮನಿ, ಮಹಾಂತೇಶ ಮಣೆಗಾರ, ಗುಡ್ಡಪ್ಪ, ರಮೇಶ ನವೀನ, ಶೃತಿ, ಮಂಗಳಾ, ಗೌರಮ್ಮ, ಮಂಜುಳಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು. ಅಗಡಿ ಬಳಿ ಬಸ್ ತಡೆದಿದ್ದ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿದ್ದೇವೆ. ಗ್ರಾಮದಲ್ಲಿ ಬಸ್ ನಿಲುಗಡೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದು, ಬಸ್ ನಿಲುಗಡೆ ಮಾಡದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದಿದ್ದಾರೆ ಎಂದು ಹಾವೇರಿ ಪ್ರಭಾರ ಸಾರಿಗೆ ವ್ಯವಸ್ಥಾಪಕ ಕೆ.ಎಂ. ಲಮಾಣಿ ಹೇಳಿದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ