ಕನ್ನಡಪ್ರಭ ವಾರ್ತೆ ಸಾವಳಗಿ
ಸರಿಯಾದ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬುಧವಾರ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಸಾವಳಗಿಯಲ್ಲಿ ನಡೆಯಿತು.ಜಮಖಂಡಿ-ಸಾವಳಗಿ ಮಾರ್ಗವಾಗಿ ಸಂಚರಿಸುವ ಬೈಕ್, ಲಾರಿ, ಬಸ್ ಎಲ್ಲವನ್ನೂ ತಡೆದು ರಸ್ತೆ ಮಧ್ಯದಲ್ಲಿ ಸಾಲುಗಟ್ಟಿ ವಿದ್ಯಾರ್ಥಿಗಳು ಕುಳಿತು ಪ್ರತಿಭಟನೆಗೆ ಮುಂದಾದರು. ನಂತರ ಸ್ಥಳಕ್ಕಾಗಮಿಸಿದ ಜಮಖಂಡಿ ಡಿಪೋ ಕಂಟ್ರೋಲರ್ ಶಿವಾಜಿ ಸುಗತೆ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಪಡೆಯುವಂತೆ ಒತ್ತಾಯಿಸಿದರು.
ವಿದ್ಯಾರ್ಥಿಯೊಬ್ಬರು ಎದ್ದು ತುಂಗಳ-ಸಾವಳಗಿ ಬಸ್ ಸಾವಳಗಿ ಬರುವಷ್ಟರಲ್ಲಿ ಸಾವಳಗಿಯಿಂದ-ಜಂಬಗಿ ಮಾರ್ಗದ ಬಸ್ ಬಿಟ್ಟಿರುತ್ತಾರೆ ಪುನಃ ಮತ್ತೊಂದು ಬಸ್ ಹತ್ತಿ ವಿದ್ಯಾರ್ಥಿಗಳು ಕಾಲೇಜ ತಲುಪುವಷ್ಟರಲ್ಲಿ ತಡವಾಗುತ್ತದೆ. ದರ್ಪದಿಂದ ಮಾತನಾಡುವ ನಿಮ್ಮ ಡೈವರ್, ಕಂಡಕ್ಟರ್‌ಗಳಿಗೆ ತಿಳಿ ಹೇಳಿ ಎಂದರು.ಸ್ಥಳಕ್ಕಾಗಮಿಸಿದ ಉಪತಹಸೀಲ್ದಾರ ವೈ.ಎಚ್.ದ್ರಾಕ್ಷಿ, ಸಾವಳಗಿ ಪಿಎಸೈ ನಾಗೇಶ ವಾಲೀಕಾರ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರೆ ಒಳ್ಳೆಯದು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಿದ್ದಂತೆ, ಕೆರಳಿದ ವಿದ್ಯಾರ್ಥಿಗಳು ಧಿಕ್ಕಾರಗಳನ್ನು ಕೂಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು. ಡಿಪೋ ಘಟಕಾಧಿಕಾರಿ ಸ್ಥಳಕ್ಕಾಗಮಿಸಬೇಕು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು.
ಸಾವಳಗಿ ಗ್ರಾಮಸ್ಥರು, ಕೆಲವು ಸಂಘಟನಾ ಕಾರ್ಯಕರ್ತರು ಪ್ರತಿಭಟನೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು. ಜಮಖಂಡಿ ಡಿಪೋ ವ್ಯವಸ್ಥಾಪಕ ಎಸ್.ಬಿ.ಗಸ್ತಿ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.ಈ ವೇಳೆ ಸಾಗರ ಬಿರಾದಾರ, ನೇಮಿನಾಥ ಜೈನ, ಸಾಗರ ಪ್ರಜಾರಿ, ಕಿರಣ ಸಿಂಪಿ, ಪ್ರಭು ತಳವಾರ, ಪ್ರಭಾವತಿ ಇಟ್ನಾಳ, ಸುಷ್ಮೀತಾ ಬೋಸಲೆ, ಜ್ಯೋತಿ ಚವ್ಹಾಣ, ಪಾರ್ಶ್ವನಾಥ ಉಪಾಧ್ಯ, ಸಿದ್ದುಬಾ ಬಂಡಿವಡ್ಡರ, ಪಾರುಖ ಪಟೇಲ ಸೇರಿದಂತೆ ಅನೇಕರು ಇದ್ದರು.