ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವನ್ಯಜೀವಿಗಳು ಹಾಗೂ ಕಾಡು ಉಳಿಸುವಲ್ಲಿ ನಮ್ಮೆಲ್ಲರ ಜೊತೆ ವಿದ್ಯಾರ್ಥಿ ಸಮೂಹ ಕೈಜೋಡಿಸಬೇಕು ಎಂದು ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿಜಯ್ ರಾಜ್ ಹೇಳಿದರು.ಇಲ್ಲಿನ ಆದರ್ಶ ಶಾಲೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಶಾಖಾ ಕಚೇರಿಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ಸಂರಕ್ಷಿಸಿ ವನ್ಯಜೀವಿಗಳನ್ನು ಉಳಿಸುವುದು ನಮ್ಮೆಲ್ಲದ ಗುರುತರ ಹೊಣೆಯಾಗಿದೆ. ಯುವ ಸಮೂಹ ಕಾನೂನು ಅರಿಯಬೇಕು, ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅರಿವಿಲ್ಲದ ಜನರು ಹಲವು ಜೀವಿಗಳನ್ನು ಭೇಟೆಯಾಡುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು ಇದು ಶಿಕ್ಷಾರ್ಹ ಅಪರಾಧ, ಇಂತಹ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಜನರು ಪ್ರಾಣಿಗಳನ್ನು ಭೇಟೆಯಾಡಲು ನಾಡಬಂದೂಕು ಹಾಗೂ ಸಿಡಿಮದ್ದುಗಳನ್ನು ಬಳಸುತ್ತಿದ್ದು ಈಗಾಗಲೇ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಇಂತಹ ಪ್ರಕ್ರಿಯೆ ನಿಲ್ಲಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹಸು, ಕರುಗಳಿಗೆ ನಾಡ ಬಾಂಬ್ ಸಿಡಿಸಿ ಸಾಯಿಸಲಾಗುತ್ತಿದೆ, ಕರಡಿಯೂ ಸಹಾ ಕಿಡಿಗೇಡಿಗಳು ಇಟ್ಟಿದ್ದ ಕೃತ್ಯಕ್ಕೆ ಬಲಿಯಾಗಿದೆ. ಮಾನವ ಇಂತಹ ಕೃತ್ಯವನ್ನು ತನ್ನ ಸ್ವಾರ್ಥಕ್ಕಾಗಿ ಮಾಡುತ್ತಿದ್ದು ಇಂತಹವರನ್ನು ಶಿಕ್ಷಿಸುವ ಕೆಲಸ ಸರ್ಕಾರ ಹಾಗೂ ಇಲಾಖೆ ಮಾಡುತ್ತಲೆ ಬಂದಿದ್ದರೂ ಸಹಾ ಇತ್ತಿಚೆಗೆ ಹಸುವನ್ನು ಹುಲಿ ತಿಂದಿದು ಎಂಬ ಕಾರಣಕ್ಕೆ ಸತ್ತ ಹಸುವಿಗೆ ವಿಷ ಹಾಕಿ 5 ಹುಲಿ ಸಾವಿಗೆ ಕಾರಣವಾಗಿರುವುದು ವಿಷಾದದ ಸಂಗತಿ ಎಂದರು.ಯುವಕರು, ವಿದ್ಯಾರ್ಥಿಗಳು ಮೂಢ ನಂಬಿಕೆ ವಿರುದ್ದ ದೂರವಿರಬೇಕು. ಮೌಢ್ಯದಿಂದಾಗಿಯೇ ಇಂದಿನ ದಿನಗಳಲ್ಲಿ ಗೂಬೆ, ಮಣ್ಣು ಮುಕ್ಕ ಹಾವು, ನಕ್ಷತ್ರ ಆಮೆಗಳು ಬಲಿಯಾಗುತ್ತಿದ್ದು , ಈ ಹಿನ್ನೆಲೆ ವಿದ್ಯಾರ್ಥಿಗಳು ಮೌಡ್ಯದ ದಾಸರಾಗಬಾರದು, ಕಲಿತು ಸತ್ ಪ್ರಜೆಗಳಾಗುವ ಜೊತೆ ಕಾಡು ಹಾಗೂ ಕಾಡಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗೆ ಜವಾಬ್ದಾರಿ ಅರಿಯಬೇಕು ಎಂದರು.
ಈ ವೇಳೆ ಮುಖ್ಯ ಪೇದೆಗಳಾದ ಬಸವರಾಜು.ಎಂ, ರಾಮಚಂದ್ರ, ಸ್ವಾಮಿ, ಲತಾ, ಪೇದೆ ಬಸವರಾಜು, ಶಾಲಾ ಶಿಕ್ಷಕರು ಇದ್ದರು.