ಕುದೂರು: ವಿದ್ಯಾರ್ಥಿಗಳು ಜೇನು ಹುಳುಗಳಂತಹ ಗುಣವಂತರಾಗಬೇಕು. ಏಕಾಗ್ರತೆ ಒಂದು ರೀತಿಯ ತಪಸ್ಸು, ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಸಾಧನೆಗೆ ಹತ್ತಿರಾಗುತ್ತಾರೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತುಮಕೂರು-ತೊರೆರಾಮನಹಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಮ್ಮೊಮ್ಮೆ ವ್ಯವಸ್ಥೆಯೊಳಗಿನ ಸುಳಿಗೆ ಸಿಲುಕಿ ನವಿಲೊಂದು ಕೋಳಿಗಳ ನಡುವೆ ತಿರಸ್ಕೃತವಾದಂತೆ ಪ್ರತಿಭಾವಂತರು ವಂಚನೆಗಳಿಗೆ ಒಳಗಾಗುವುದುಂಟು. ಆದರೆ ಕಾಲದ ತಿಳಿತಂಗಾಳಿಯಲ್ಲಿ ಅವರ ಪ್ರತಿಭೆ ಸುಗಂಧವಾಗಿ ಜಗತ್ತಿಗೆ ಹರಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಮೊಬೈಲ್‌ನಿಂದ ಸಾಧನೆಗೆ ಅಡಚಣೆ:
ವಿದ್ಯಾರ್ಥಿಗಳು ಹೆಚ್ಚು ಸಮಯ ಮೊಬೈಲ್ ನೋಡುವುದರಿಂದ ಕಣ್ಣಿನ ತೇವಾಂಶ ನಾಶವಾಗುತ್ತದೆ. ಮೊಬೈಲ್ ಬೆಳಕು ಕಣ್ಣಿನ ತೇವಾಂಶಕ್ಕೆ ಹೊಡೆತ ಕೊಡುತ್ತದೆ. ಇದರಿಂದಾಗಿಯೇ ಹೆಚ್ಚು ಹೊತ್ತು ಮೊಬೈಲ್ ನೋಡಿದಾಗ ಕಣ್ಣಿನ ಉರಿ ಬರುತ್ತದೆ ಎಂದು ಸ್ವಾಮೀಜಿ ವಿವರಿಸಿದರು.ಯಾವ ವ್ಯಕ್ತಿಗೆ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವ ಯೋಗ್ಯತೆ ಇದೆಯೋ ಆತನಿಗೆ ಹಕ್ಕುಗಳು ಹೂಮಾಲೆಯಂತೆ ಹತ್ತಿರ ಬರುತ್ತದೆ. ವಿದ್ಯಾರ್ಥಿಗಳು ಮಾನಸಿಕ ಗುಲಾಮಗಿರಿಯನ್ನು ಹತ್ತಿಸಿಕೊಳ್ಳಬಾರದು. ನಿಮ್ಮ ಸ್ಥಾನಗಳನ್ನು ಮಾನವನ್ನಾಗಿ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮಗಳ ಮೇಲಿದೆ. ಗೆಲುವು ಅಂತಿಮ ಅಲ್ಲ. ಸೋಲು ಅಪಮಾನವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು ಎಂದು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕುದೂರು ಬಳಿಯ ತೊರೆರಾಮನಹಳ್ಳಿ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಶ್ರೀ ಪರಮಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯಗಳ ಕುರಿತು ಅಧ್ಯಯನ ಮಾಡಿದರೆ ಮಹೋನ್ನತವಾದುದನ್ನು ಸಾಧಿಸಬಹುದು. ವಿದ್ಯಾರ್ಥಿಗಳು ಸಾಧನೆಯ ವಿಷಯದಲ್ಲಿ ಅಲ್ಪತೃಪ್ತರಾಗಬಾರದು. ವಿದ್ಯಾಭ್ಯಾಸದ ಅವಧಿಯಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ನಾನು ಕಂಡ ಅಧ್ಯಾತ್ಮಿಕ ಕ್ಷೇತ್ರದ ಅಪ್ರತಿಮ ಚಿಂತಕರು ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಹುಶಃ ಇವರು ಮಾಡಿದಷ್ಟು ಕಾರ್ಯಾಗಾರಗಳನ್ನು ಯಾವುದೇ ಸಂಘಸಂಸ್ಥೆಗಳು ಮಾಡಿಲ್ಲ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗಂಗಾಧರ್ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳ ಪುಟ್ಟ ಪುಸ್ತಕವೊಂದು ನಮ್ಮ ಬಳಿ ಇದ್ದರೆ ಸಿಂಹವೊಂದು ನಮ್ಮ ಜೊತೆ ಇದ್ದಂತೆ. ಏಕೆಂದರೆ ಅವರ ಸಿಂಹಸದೃಶ ನುಡಿಗಳು ವಿದ್ಯಾರ್ಥಿಗಳು ಮತ್ತು ಯುವಕರ ಎದೆಯೊಳಗಿದೆ ಕಿಲುಬನ್ನು ಕಳೆದು ಧೈರ್ಯ ಮತ್ತು ಭರವಸೆ ತುಂಬುತ್ತದೆ ಎಂದರು.ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕ ತೆಗೆದ ತಾಲೂಕಿನ ವಿದ್ಯಾರ್ಥಿಗಳಿಗೆ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮ ನಗದು ಬಹುಮಾನ ನೀಡಿ ಸ್ವಾಮೀಜಿದ್ವಯರು ಅಭಿನಂದಿಸಿದರು.
ಮಾಗಡಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಡುಕುಂಟೆ ಮಂಜುನಾಥ್, ಮಹಂತೇಶ್ವರ ಪ್ರೌಢಶಾಲೆಯ ಕನ್ನಡ ಶಿಕ್ಷಕ ತಾಯಣ್ಣ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ನಾರಾಯಣಪ್ಪ, ಉಪಪ್ರಾಂಶುಪಾಲೆ ಶ್ರೀದೇವಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಜಗದೀಶ್, ಶಾರದಮ್ಮ, ಶಿಕ್ಷಕ ನವೀನ್, ಶಿಕ್ಷಣ ಇಲಾಖೆ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಕುಸುಮ ಗಂಗಾಧರ್, ರಾಮನಹಳ್ಳಿ ಮೂರ್ತಿ, ಆರ್ಯವೈಶ್ಯ ಮಂಡಳಿಯ ಮಾಜಿ ಅಧ್ಯಕ್ಷ ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.24ಕೆಆರ್ ಎಂಎನ್ 2.ಜೆಪಿಜಿ
ಕುದೂರು ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಪರಮಾನಂದ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಹಾಜರಿದ್ದರು.