ರಾಮನಗರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲೇ ಸಮುದಾಯ ಹಾಗೂ ಸಾಮಾಜಿಕ ಸೇವಾ ಚಟುವಟಿಕೆ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್ ಹೇಳಿದರು.
ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆ ಶ್ರಮದಾನ ಮತ್ತು ಹುಲಿಕೆರೆ ಗುನ್ನೂರು ಗ್ರಾಪಂನಿಂದ ಸ್ವಚ್ಛ ಶುಕ್ರವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸೇವಾ ಕಾರ್ಯಗಳು ಉತ್ತಮ ಸಮಾಜ ನಿರ್ಮಾಣದ ಅಡಿಗಲ್ಲಾಗುತ್ತವೆ. ಶಿಕ್ಷಣ ಜ್ಞಾನ ನೀಡಿದರೆ ಪಠ್ಯೇತರ ಚಟುವಟಿಕೆ ನಮಗೆ ಸಾಮಾಜಿಕ ಬದುಕಿನ ಚಿಂತನೆಗಳನ್ನು ಮೈಗೂಡಿಸುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆ ಸಾಮಾಜಿಕ ಚಟುವಟಿಕೆ ತಿಳಿಯಲು ಉದ್ದೇಶದಿಂದ ಶಿಕ್ಷಣ ಇಲಾಖೆ ಮತ್ತು ಕಾಲೇಜುಗಳು ನಡೆಸುವ ಇಂತಹ ಸೇವಾ ಚಟುವಟಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಜೀವನ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಮಾತನಾಡಿ, ಶಾಲಾ ಕಾಲೇಜು ನಡೆಸುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳ ಬಗ್ಗೆ ಉದಾಸೀನತೆ ತಾಳದೆ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ಹೊರಗಿನ ವಾತಾವರಣದಲ್ಲಿ ಬಹಳಷ್ಟು ಕಲಿಯಬೇಕಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆ, ಸಮಾಜದಲ್ಲಿ ಜನರ ಜೊತೆ ನಡೆದುಕೊಳ್ಳುವ ರೀತಿ ನೀತಿ, ಪರಿಸರ ಕಾಳಜಿ ತಿಳಿಸುತ್ತದೆ. ಜೊತೆಗೆ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬದುಕು ರೂಪಿಸುವ ಪಾಠ ಕಲಿಸುತ್ತದೆ ಎಂದು ಹೇಳಿದರು.
ಕ್ರೈಸ್ಟ್ ಅಕಾಡೆಮಿ ಎನ್ನೆಸ್ಸೆಸ್ ಅಧಿಕಾರಿ ನವೀನ್ ಮಾತನಾಡಿ, ಪ್ರತೀ ವರ್ಷ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿವಿಧ ಸ್ಥಳಗಳಲ್ಲಿ ಶಿಬಿರ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಶಿಬಿರದಲ್ಲಿ ಗ್ರಾಮದ ಬೀದಿಗಳ ಸ್ವಚ್ಛತೆ, ಜನರಿಗೆ ಆರೋಗ್ಯ ಅರಿವು, ಪರಿಸರ ಜಾಗೃತಿ, ಬೀದಿ ನಾಟಕಗಳ ಮುಖಾಂತರ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅವ್ವೇರಹಳ್ಳಿ ಗ್ರಾಮಸ್ಥರು ಮತ್ತು ಶಾಲೆಯ ಶಿಕ್ಷಕರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಶಿಬಿರಕ್ಕೆ ಉತ್ತಮ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.ಶ್ರಮದಾನ ಶಿಬಿರ:
ಇದೇ ಸಂದರ್ಭದಲ್ಲಿ ಹುಲಿಕೆರೆ ಗುನ್ನೂರು ಗ್ರಾಪಂ ಸಿಬ್ಬಂದಿ ಅಧಿಕಾರಿಗಳಿಂದ ಮತ್ತು ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛ ಶುಕ್ರವಾರ ನಡೆಯಿತು. ಬೆಟ್ಟದ ಮೇಲಿನ ರೇವಣಸಿದ್ದೇಶ್ವರ, ಭೀಮೇಶ್ವರ ದೇವಾಲಯ, ರೇಣುಕಾಂಬ ದೇವಾಲಯ ಮತ್ತು ಅಕ್ಕಪಕ್ಕದಲ್ಲಿ ಶ್ರಮದಾನ ನಡೆಸಿ ಕಸ ಸಂಗ್ರಹಿಸಿದರು. ಬೆಟ್ಟಕ್ಕೆ ಬಂದ ಭಕ್ತರಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಕ್ರೈಸ್ಟ್ ಅಕಾಡೆಮಿ ಪ್ರಾಂಶುಪಾಲ ಫಾ. ಆಂಟೋನಿ ಡೇವಿಡ್, ಗ್ರಾಪಂ ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಕಾರ್ಯದರ್ಶಿ ಅರುಣ್ ಕುಮಾರ್, ಬಿಲ್ ಕಲೆಕ್ಟರ್ ರೇಣುಕಯ್ಯ, ಸಿಬ್ಬಂದಿಗಳಾದ ದೀಪು, ನಿರಂಜನ್, ಪುಟ್ಟಸ್ವಾಮಿ, ಸಿದ್ದಪ್ಪಾಜಿ, ನಾಗೇಶ್ ನಾಯ್ಕ, ಪುಷ್ಪಾ, ರಾಧಾ, ಕುಮಾರಸ್ವಾಮಿ, ಪ್ರೇಮಾ, ಲಿಖಿತ್, ಮಧು, ಕುಮಾರ್, ರಶ್ಮಿ ಹಾಜರಿದ್ದರು.
23ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಶ್ರಮದಾನ ಮತ್ತು ಹುಲಿಕೆರೆ ಗುನ್ನೂರು ಗ್ರಾಪಂನಿಂದ ಸ್ವಚ್ಛ ಶುಕ್ರವಾರ ಕಾರ್ಯಕ್ರಮ ನಡೆಯಿತು.