ಶನಿವಾರ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಐ ಆಧಾರಿತ ಸಂವಹನಾತ್ಮಕ ಫ್ಲಾಟ್ ಪ್ಯಾನಲ್ ತರಗತಿ ಉದ್ಘಾಟನೆ ನೆರವೇರಿತು.
ಕಾರ್ಕಳ: ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುವ ಮಹತ್ವದ ಕಾರ್ಯವನ್ನು ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ನೈರುತ್ಯ ಶಿಕ್ಷಕ ಕ್ಷೇತ್ರದ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಅವರು ಶನಿವಾರ ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಐ ಆಧಾರಿತ ಸಂವಹನಾತ್ಮಕ ಫ್ಲಾಟ್ ಪ್ಯಾನಲ್ ತರಗತಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ, ಏಕಾಗ್ರತೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಪಾಠಗಳನ್ನು ಓದುವುದು, ಮರುಪಠಣ ಮಾಡುವುದು ಮತ್ತು ಪುನರ್ಮನನ ಮಾಡುವುದು ಉತ್ತಮ ಫಲಿತಾಂಶ ಪಡೆಯಲು ಅತ್ಯಂತ ಅಗತ್ಯವೆಂದು ಹೇಳಿದರು.ಪೋಷಕರ ಕಿವಿಮಾತು ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಆಧುನಿಕ ಎಐ ಆಧಾರಿತ ಶಿಕ್ಷಣವನ್ನು ನೀಡುವ ಕಾರ್ಯವೂ ಎಸ್.ಆರ್. ಶಿಕ್ಷಣ ಸಂಸ್ಥೆಯಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಪೋಷಕರು ಮಕ್ಕಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಸಲಹೆ ನೀಡಿದ ಅವರು, ಜೀವನ ಸಾರ್ಥಕವಾಗಿರಬೇಕು; ಬದುಕು ಸಂಭ್ರಮಮಯವಾಗಿ ಚಿನ್ನದಂತೆ ಹೊಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಬೆಂಗಳೂರು ಜೆ.ಎಸ್.ಪಿ.ಪೂ. ಹಾಗೂ ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕ ಹಾಗೂ ಚೇರ್‌ಮನ್ ಡಾ. ಜಯರಾಮ ಶೆಟ್ಟಿ ಮಾತನಾಡಿ, ಕರಾವಳಿಯ ಸಂಸ್ಕೃತಿ ಹೆಮ್ಮೆಯ ವಿಷಯವಾಗಿದ್ದು, ಕಾಲೇಜಿನಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಪರಿಣಾಮ ವಿದ್ಯಾರ್ಥಿಗಳ ಸಾಧನೆ ಮತ್ತು ಅವರ ಅಭಿವ್ಯಕ್ತಿಯ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಾಧನೆಗಳು ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯವನ್ನು ಬಿಂಬಿಸುತ್ತವೆ. ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ನಿರ್ಮಾಣದ ಮಹತ್ವದ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಶಿಕ್ಷಕರ ಸಹಕಾರ ಸೃಜನಶೀಲತೆಯನ್ನು ಮಕ್ಕಳಲ್ಲಿ ಅರಳಿಸುವ ಕಾರ್ಯ ಎಸ್.ಆರ್. ಶಿಕ್ಷಣ ಸಂಸ್ಥೆಯಿಂದ ಸಾಧ್ಯವಾಗಿದೆ. ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು .
ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿದ ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಂಜುನಾಥ ಪೂಜಾರಿ, ವಿದ್ಯಾರ್ಥಿಗಳು ನಾಳೆಯ ಸಂಪತ್ತು, ಪೋಷಕರ ತ್ಯಾಗವನ್ನು ಮಕ್ಕಳು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್.ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಶೆಟ್ಟಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ತಂದೆ–ತಾಯಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತಿ ಮುಖ್ಯವೆಂದರು. ಮುಂದಿನ ದಿನಗಳಲ್ಲಿ ವೈದ್ಯಕೀಯವಾಗಲಿ ಅಥವಾ ಯಾವುದೇ ಕ್ಷೇತ್ರವಾಗಲಿ, ವೃತ್ತಿ ಆಯ್ಕೆಯನ್ನು ಮಕ್ಕಳು ಸ್ವತಃ ಮಾಡಿಕೊಳ್ಳಬೇಕು; ಅವರ ಆಸೆಗಳನ್ನು ಈಡೇರಿಸಲು ಪೋಷಕರು ಸಹಕಾರ ನೀಡಬೇಕು ಎಂದು ಹೇಳಿದರು. ಪೋಷಕರು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳೊಂದಿಗೆ ಸಮಯ ಕಳೆಯಬೇಕು ಎಂದು ಸಲಹೆ ನೀಡಿದರು.
ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಬೆನ್ನೆಲುಬಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. 2025ರಲ್ಲಿ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ 60 ಲಕ್ಷ ರು.ಕ್ಕೂ ಅಧಿಕ ಮೊತ್ತವನ್ನು ಸಹಾಯಧನವಾಗಿ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಗೋಪಾಲಾಚಾರ್, ಕಾಲೇಜು ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್, ಭಗವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಂಜುನಾಥ ಪೂಜಾರಿ ಹಾಗೂ ಸಾಧಕ ವಿದ್ಯಾರ್ಥಿಗಳು, ಶಿಕ್ಷಕರನ್ನು ಸನ್ಮಾನಿಸಲಾಯಿತು.ಕಾಲೇಜಿನ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಸ್ವಾಗತಿಸಿದರು. ಸುವರ್ಣ ಹಾಗೂ ಹೇಮ , ದೀಪಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.