ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು: ಚಂದ್ರಶೇಖರ್

KannadaprabhaNewsNetwork | Published : Feb 4, 2025 12:34 AM

ಸಾರಾಂಶ

ಗ್ರಾಮೀಣ ಭಾಗದಲ್ಲಿ ದಿ.ಕೆ.ಎನ್.ನಾಗೇಗೌಡರು ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತು ದೇಶ ವಿದೇಶಗಳಲ್ಲಿ ಉದ್ಯೋಗ ಪಡೆದು ಮಾದರಿಯಾಗಿ ಬದುಕುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕು ನೀಡಿದವರು ಕೆ.ಎನ್ ನಾಗೇಗೌಡರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಸೇವಾ ಗ್ಲೋಬಲ್ ಲಾಜಿಸ್ಟಕ್ ಸೆಲ್ಯೂಷನ್ಸ್ ಪ್ರವೇಟ್ ಲಿ.ನಿರ್ದೇಶಕ ದಡದಪುರ ಚಂದ್ರಶೇಖರ್ ತಿಳಿಸಿದರು.

ಶಾಂತಿ ಪದವಿ ಪೂರ್ವ ಕಾಲೇಜು ವತಿಯಿಂದ ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ನಡೆದ ಕೆ.ಎನ್.ನಾಗೇಗೌಡರ ಜನ್ಮದಿನಾಚರಣೆ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು, ಸಾಧನೆ ಮಾಡಲು ನಿರಂತರವಾಗಿ ಶ್ರಮಿಸಬೇಕು. ಬದುಕು ಹಸನು ಮಾಡಿಕೊಳ್ಳುವ ಜೊತೆಗೆ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ದಿ.ಕೆ.ಎನ್.ನಾಗೇಗೌಡರು ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತು ದೇಶ ವಿದೇಶಗಳಲ್ಲಿ ಉದ್ಯೋಗ ಪಡೆದು ಮಾದರಿಯಾಗಿ ಬದುಕುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕು ನೀಡಿದವರು ಕೆ.ಎನ್ ನಾಗೇಗೌಡರಾಗಿದ್ದಾರೆಂದು ಸ್ಮರಿಸಿದರು.

ವಿದ್ಯಾಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಯಾವ ಮಾರ್ಗದಲ್ಲಿ ಹೋಗಬೇಕು ಎನ್ನುವುದನ್ನು ಜೊತೆಗೆ ಶಿಸ್ತು ಮತ್ತು ಸಮಯಪಾಲನೆಯನ್ನು ಕಲಿಸುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಪ್ರವೃತ್ತಿ ಬೆಳೆಯುತ್ತಿರುವುದು ವಿಪರ್ಯಾಸದ ಸಂಗತಿ. ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ನೀಡುವಂತಾಗಬೇಕು. ತಂದೆ ತಾಯಿಗಳ ಋಣ ತೀರಿಸುವ ಚಿಂತನೆ ಹೊಂದಿರಬೇಕು. ಕಷ್ಟಪಟ್ಟು ಓದಿ ಜೀವನದಲ್ಲಿ ಯಶಸ್ಸು ಸಾಧಿಸಿ ದೇಶಕ್ಕೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಎಂ.ಕೆ ನಾಗಮಣಿ ನಾಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಎನ್.ನಾಗೇಗೌಡರು ರಾಜಕೀಯದಲ್ಲಿ ಹೊಸ ಸುಧಾರಣೆ ತರುವ ಜೊತೆಗೆ ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು. ವಿವಿಧ ವಿಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆಂದು ತಿಳಿಸಿದರು.

ಇದೇ ವೇಳೆ ಹಾಸ್ಯ ಕಲಾವಿದೆ ರೇಖಾದಾಸ್ ವಿದ್ಯಾರ್ಥಿಗಳನ್ನು ರಂಜಿಸಿದರು. ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಚ್.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಕೆಂಪಯ್ಯ, ಖಂಜಾಂಚಿ ಕೆ.ಸಿ ಪುಟ್ಟೀರೇಗೌಡ, ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು, ಪ್ರಾಂಶುಪಾಲರಾದ ವೇದಮೂರ್ತಿ, ಸಿ.ಅನಿತಾ, ಎಂ.ಸಿ ಶಿವಪ್ಪ ಸೇರಿದಂತೆ ಇತರರು ಇದ್ದರು.

Share this article