ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ಶಿಸ್ತು ಬೆಳೆಸಿಕೊಳ್ಳಲಿ

KannadaprabhaNewsNetwork | Published : Mar 4, 2025 12:33 AM

ಸಾರಾಂಶ

ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ, ಶಿಸ್ತು ಬೆಳೆಸಿಕೊಳ್ಳಬೇಕು.

ಭಟ್ಕಳ: ಇಲ್ಲಿನ ಆಸರಕೇರಿಯ ತಿರುಮಲ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ಬೆಂಗಳೂರಿನ ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜೆಪಿಎನ್ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಲ್. ಶಿವಾನಂದ ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು, ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ, ಶಿಸ್ತು ಬೆಳೆಸಿಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದರೆ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತದೆ. ಜೆಪಿಎನ್ ಪ್ರತಿಷ್ಠಾನ ಮತ್ತು ಆರ್.ಎಲ್. ಜಾಲಪ್ಪ ಅಕಾಡೆಮಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೊಡಲಾಗುತ್ತಿದ್ದು, ಇದನ್ನು ಸಮಾಜ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಪ್ರತಿಭಾ ಪುರಸ್ಕಾರ, ಕೌಶಲ್ಯಾಭಿವೃದ್ಧಿ, ವೈದ್ಯಕೀಯ ವೆಚ್ಚ ಸೇರಿದಂತೆ ಶಿಕ್ಷಣಕ್ಕಾಗಿ ಜೆ.ಪಿ.ಎನ್. ಪ್ರತಿಷ್ಠಾನ ವರ್ಷಕ್ಕೆ ₹೨ ಕೋಟಿ ಮೊತ್ತ ವ್ಯಯಿಸುತ್ತಿದೆ. ಪ್ರತಿಭಾ ಪುರಸ್ಕಾರ ಪಡೆದುಕೊಂಡ ವಿದ್ಯಾರ್ಥಿಗಳು ಮುಂದೆ ತಮ್ಮ ಸುತ್ತಮುತ್ತಲಿರುವ ಸಮಾಜದ ಅಸಹಾಯಕರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವ ಮೂಲಕ ಸಮಾಜವನ್ನು ಉತ್ತಮವಾಗಿ ಕಟ್ಟಬಹುದು ಎಂದರು.

ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಮಾಜಿ ಶಾಸಕರಾದ ಸುನೀಲ್ ನಾಯ್ಕ, ಜೆ.ಡಿ. ನಾಯ್ಕ, ಜಿಪಿಎನ್ ಪ್ರತಿಷ್ಠಾನದ ಕಾರ್ಯದರ್ಶಿ ಕುಸುಮಾ ಅಜಯ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ರವಿ ನಾಯ್ಕ ಮಾತನಾಡಿದರು. ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಡಾ. ನಾಗೇಶ ಕಾಗಾಲ ಅಧ್ಯಕ್ಷತೆ ವಹಿಸಿದ್ದರು. ಜೆಪಿಎನ್ ಪ್ರತಿಷ್ಠಾಪನದ ಅಧ್ಯಕ್ಷರು ಹಾಗೂ ಟ್ರಸ್ಟಿಗಳನ್ನು ಸನ್ಮಾನಿಸಲಾಯಿತು. ಜೆ.ಪಿ.ಎನ್. ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಮಂಜಪ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಆರ್. ಪೂರ್ಣೇಶ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಮಲಾ ನಾಯ್ಕ ಉಪಸ್ಥಿತರಿದ್ದರು. ಸತೀಶಕುಮಾರ ನಾಯ್ಕ ಸ್ವಾಗತಿಸಿದರು. ಪ್ರತಿಷ್ಠಾನದ ಗೌರವ ಸಂಚಾಲಕ ಡಾ. ಪದ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಪಿಎನ್ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಶ್ರೀಧರ ನಾಯ್ಕ ವಂದಿಸಿದರು. ಶಿಕ್ಷಕ ನಾರಾಯಣ ನಾಯ್ಕ ಹಾಗೂ ದಿವ್ಯಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ 61 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Share this article