ಹಾವೇರಿ: ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ಹಾಗೂ ಪ್ರಜಾಸತ್ತಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಹೆತ್ತವರಿಗೆ ಹಾಗೂ ಸಮಾಜಕ್ಕೆ ಉತ್ತಮ ಆಸ್ತಿಯಾಗಲು ಸದಾ ಪ್ರಯತ್ನಶೀಲರಾಗಬೇಕು ಎಂದು ಹುಕ್ಕೇರಿಮಠ ಜ. ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಸ್.ಎಸ್. ಮುಷ್ಠಿ ಹೇಳಿದರು.
ಆಧುನಿಕತೆ ಬೆಳೆದಂತೆ, ಶಿಕ್ಷಣದ ಪರಿಭಾಷೆಯು ಬದಲಾಗುತ್ತಿದೆ. ಗುರು ಶಿಷ್ಯ ಸಂಬಂಧವು ಕೇವಲ ವ್ಯವಹಾರಿಕವಾಗಿದೆ. ಇಂಥಹ ಪರಿಸ್ಥಿತಿಯಲ್ಲೂ ಉತ್ತಮ ಶಿಷ್ಯ ಬಳಗ ಹಾಗೂ ಸಮರ್ಪಣಾಭಾವದ ಶಿಕ್ಷಕರು ಜೊತೆಯಾಗಿ ಶಾಲೆಯನ್ನು ಸರ್ವತೋಮುಖವಾಗಿ ಬೆಳೆಸಿದಾಗ ಅದು ಮುಂದಿನ ತಲೆಮಾರಿನ ಸಮಾಜದ ಉತ್ತಮ ಅಡಿಪಾಯವಾಗುತ್ತದೆ. ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಅಂಥಹ ಗುರುಶಿಷ್ಯ ಸಂಬಂಧವು ನಮ್ಮಲ್ಲಿ ಕಾಣುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಸಹಾಯ ಸಂಘದ ವಲಯ ಮುಖ್ಯಸ್ಥೆ ವಿಜಯಶ್ರೀ ಮಾತನಾಡಿ, ಇಂದು ಶಿಕ್ಷಣವು ವ್ಯಾಪಾರೀಕರಣವಾಗಿದೆ. ವಿದ್ಯಾರ್ಥಿಯ ಬುದ್ಧಿಶಕ್ತಿಯನ್ನು ಕೇವಲ ಅಂಕಗಳಿಂದ ಅಳೆಯಲಾಗುತ್ತಿದೆ. ವಿದ್ಯಾರ್ಥಿಗಳು ಸತತ ಪರಿಶ್ರಮ, ತಾಳ್ಮೆಯಿಂದ ಅಧ್ಯಯನಶೀಲರಾಗಿ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಪ್ರಯತ್ನಿಸಿ, ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋದವರ ಮೊದಲ ಲಕ್ಷಣವೇ ಪರಿಶ್ರಮವಾಗಿದೆ ಎಂದು ಹೇಳಿದರು.ಪ್ರಾಚಾರ್ಯರಾದ ಎಸ್.ವಿ. ಹಿರೇಮಠ ಮಾತನಾಡಿ, ಇಂದು ವಿದ್ಯಾರ್ಥಿಗಳಾಗಿದ್ದು, ಮುಂದೆ ಜೀವನದಲ್ಲಿ ಸಾಧಕರಾಗಿ, ಸಾಧನೆಯ ನಂತರ ಕಲಿತ ಶಾಲೆ ಹಾಗೂ ಕಲಿಸಿದ ಶಿಕ್ಷಕರನ್ನು ಎಂದೂ ಮರಿಯಬೇಡಿರಿ. ನನ್ನ ಶಾಲೆ ನನ್ನ ಹೆಮ್ಮೆ ಎನ್ನುವದು ನಮ್ಮ ಧ್ಯೇಯವಾಗಬೇಕು.ಶಾಲೆಯ ಅಭಿವೃದ್ಧಿಗೆ ಕೈಲಾದ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದರು.
ಪ್ರಾಚಾರ್ಯ ಎಸ್.ಬಿ. ಅಣ್ಣಿಗೇರಿ, ಎಸ್.ಎನ್.ಮಳೆಪ್ಪನವರ, ಎಸ್. ಸಿ.ಮರಳಿಹಳ್ಳಿ ಮಾತನಾಡಿದರು. ಮುಖ್ಯೋಪಾಧ್ಯಾಯನಿ ಚನ್ನಮ್ಮ ಅಂತರವಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿನಯ ಬನ್ನಿಹಳ್ಳಿ, ಶೋಭಾ ನಾಶೀಪುರ, ರೂಪಾ ಟಿ.ಆರ್. ಲೀಲಾವತಿ ಅಂದಾನಿಮಠ ಮತ್ತಿತರರು ಇದ್ದರು.