ರಾಣಿಬೆನ್ನೂರು: ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ಬದುಕು ತುಂಬಾ ವೇಗವಾಗಿ ಹೋಗುತ್ತಿದೆ. ಅದಕ್ಕೆ ತಕ್ಕನಾಗಿ ನಾವು ನಮ್ಮನ್ನು ಅಣಿಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ರೂಢಿಸಿಕೊಂಡಲ್ಲಿ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಪದವಿಯ ನಂತರ ಉದ್ಯೋಗದಲ್ಲಿ ಕೀಳರಿಮೆ ಬೆಳೆಸಿಕೊಳ್ಳಬೇಡಿ, ವೃತ್ತಿಗೆ ಗೌರವ ಕೊಡುವುದರೊಂದಿಗೆ ಉದ್ಯೋಗದಲ್ಲಿ ತೊಡಗಿಕೊಳ್ಳಿ ಎಂದರು.
ಹಲಗೇರಿ ಹಾಲಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾ. ಬಿ.ಎಚ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಕನಸು ಕಾಣಬೇಕು ಹಾಗೂ ಗುರಿ ಇರಿಸಿಕೊಳ್ಳಬೇಕು. ಉತ್ತಮ ವಿದ್ಯಾರ್ಥಿ ಆಗುವ ಮೂಲಕ ಮನೆಗೆ ಹಾಗೂ ಸಮಾಜಕ್ಕೆ ಒಳ್ಳೆಯ ಮಗನಾಗಿ ಎಲ್ಲರ ಪ್ರೀತಿಯನ್ನು ಗಳಿಸುವಂತಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ. ಪ್ರೊ. ಎಸ್. ಪಿ ಗೌಡರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಕಾಲೇಜುಗಳಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಕ್ರೀಡೆ, ಯೋಗಾಸನ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ತಮವಾಗಿ ತೊಡಗಿಕೊಳ್ಳುವ ಮೂಲಕ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆದುಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.