ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಭವಿಷ್ಯದ ಯುವಶಕ್ತಿಗೆ ಶಿಕ್ಷಣ ಪ್ರಬಲ ಅಸ್ತ್ರವಾಗಲು ಶ್ರದ್ಧೆಯಿಂದ ಓದಿಗೆ ಒತ್ತು ನೀಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಂ ನೆಲ್ಲಿತ್ತಾಯ ತಿಳಿಸಿದರು.ಗೋವಿಂದನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮುಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಸಂಸ್ಥೆ ಅಶಕ್ತ ಕುಟುಂಬಗಳಿಗೆ ಚೈತನ್ಯ ಮೂಡಿಸಲು ಮಹಿಳಾ ಸಬಲೀಕರಣ, ಸ್ವಾವಲಂಭನೆ ಬದುಕಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಜ್ಞಾನವಿಕಾಸ ಸಂಘ ದಡಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹಲವು ಯೋಜನೆ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆಸರೆಯಾಗಿ ಶಿಷ್ಯವೇತನವನ್ನು ಪಿಯು ನಂತರದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೀಡುತ್ತಿದೆ ಎಂದರು.ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಯಲ್ಲಿ ಲೆಕ್ಕ ಮಾಡುವ ಬದಲು ಕನಿಷ್ಠ ಡಿಗ್ರಿ ಓದಿ ನೀವೇ ಸ್ವಂತ ಉದ್ಯೋಗ ಸೃಷ್ಟಿಸಿಕೊಂಡು ನಿಮ್ಮ ವ್ಯವಹಾರದ ಲೆಕ್ಕ ಹಾಕುವಂತಾಗಬೇಕು. ಓದುವ ವಯಸ್ಸಿನಲ್ಲಿ ಶ್ರದ್ಧೆ ಇರಬೇಕು. ಕ್ಷಣಿಕ ಆಸೆಗಳಿಗೆ ಬಲಿಯಾಗದಿರಿ ಎಂದು ತಿಳಿ ಹೇಳಿದರು.
ಇನ್ಸ್ ಸ್ಪೆಕ್ಟರ್ ರೇವತಿ ಮಾತನಾಡಿ, ಸಂಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿಸ್ವಾರ್ಥವಾಗಿ ಅಕ್ಷರ, ಪರಿಸರ, ಉದ್ಯೋಗ, ಆರೋಗ್ಯ, ದೇಗುಲ ಸಂರಕ್ಷಣೆ, ನಿರುದ್ಯೋಗಿಗಳಿಗೆ ತರಬೇತಿ, ಆರ್ಥಿಕ ವ್ಯವಹಾರಕ್ಕೆ ಬ್ಯಾಂಕಿಂಗ್‌ನಂತಹ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಷ್ಯವೇತನ ಭವಿಷ್ಯದ ಮಕ್ಕಳಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.ಇದೇ ವೇಳೆ ಡಿಗ್ರಿ, ಇಂಜಿನಿಯರಿಂಗ್ ಮತ್ತಿತರ ವ್ಯಾಸಂಗ ಮಾಡುತ್ತಿರುವ ಅರ್ಹ 150 ವಿದ್ಯಾರ್ಥಿಗಳಿಗೆ ಶಿಷ್ಯವೇತನಾ ಅರ್ಹತಾ ಪತ್ರ ವಿತರಿಸಲಾಯಿತು. ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ಮೇಲ್ವಿಚಾರಕರಾದ ರೇಣುಕಾ, ಯಶೋದಾ, ಮುಖಂಡ ಮೊಟ್ಟೆಮಂಜು, ದೇವರಾಜು ಮತ್ತಿತರರಿದ್ದರು.