ವಿದ್ಯಾರ್ಥಿ ದೆಸೆಯಲ್ಲೇ ಉನ್ನತ ಗುರಿಯಿರಲಿ

KannadaprabhaNewsNetwork |  
Published : Jun 18, 2025, 03:17 AM IST
ಫೋಟೋ : ೧೭ಕೆಎಂಟಿ_ಜೆಯುಎನ್_ಕೆಪಿ೧ : ಬಾಳಿಗಾ ವಾಣಿಜ್ಯ ಕಾಲೇಜಿನ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಮಾತನಾಡಿದರು. ವಿ.ಎಂ.ಪೈ, ಎನ್.ಡಿ.ನಾಯ್ಕ, ಅರವಿಂದ ನಾಯಕ, ಸುರೇಶ ಭಟ್ ಇತರರು ಇದ್ದರು.  | Kannada Prabha

ಸಾರಾಂಶ

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ. ಈ ಸಮಯ ಸರಿಯಾಗಿ ಬಳಸಿಕೊಂಡು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು

ಕುಮಟಾ: ವಿದ್ಯಾರ್ಥಿಗಳು ಮೊಬೈಲ್, ಟಿವಿ, ಅಂತರ್ಜಾಲಗಳನ್ನು ಒಳ್ಳೆಯ ಉದ್ದೇಶ, ಪ್ರಪಂಚ ಹಾಗೂ ವಿಷಯ ಜ್ಞಾನ ಸಂಪಾದನೆಗೆ ಮಾತ್ರ ಬಳಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಉನ್ನತ ಗುರಿಗಾಗಿ ಕಠಿಣ ಪರಿಶ್ರಮದ ಮೂಲಕ ಮುನ್ನಡೆದರೆ ಉನ್ನತ ಸಾಧನೆ ಸಾಧ್ಯ ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹೇಳಿದರು.

ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ. ಈ ಸಮಯ ಸರಿಯಾಗಿ ಬಳಸಿಕೊಂಡು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಕೌಶಲ್ಯ ಗಳಿಸಬೇಕು. ತಮ್ಮ ಪದವಿ ಅಧ್ಯಯನದ ಜತೆಗೆ ಐಎಎಸ್ ಕೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕು. ಕೇವಲ ಅಂಕಪಟ್ಟಿಯಿಂದ ಉದ್ಯೋಗ ದೊರಕುವುದು ಈಗಿನ ಕಾಲದಲ್ಲಿ ತುಂಬಾ ಕಷ್ಟಕರವಾದ ಸಂಗತಿ. ಹೀಗಾಗಿ ವಿದ್ಯಾರ್ಥಿಗಳು ವಿಷಯ ಜ್ಞಾನದ ಜತೆಗೆ ಲೋಕಜ್ಞಾನ, ಜೀವನ ಜ್ಞಾನ ಗಳಿಸಿಕೊಂಡು ಶ್ರೇಷ್ಠ ವ್ಯಕ್ತಿತ್ವದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ಕೆನರಾ ಕಾಲೇಜು ಸೊಸೈಟಿ ಸದಸ್ಯ, ನಿವೃತ್ತ ಪ್ರಾಚಾರ್ಯ ಡಾ. ವಿ.ಎಂ.ಪೈ ಮಾತನಾಡಿ, ಇಂದಿನ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಭಾಷೆ, ಸಂವಹನ ಹಾಗೂ ಮಂಡನಾ ಕೌಶಲ್ಯ ಬೆಳೆಸಿಕೊಂಡು ಸಾಧನೆಗೈಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್.ಡಿ. ನಾಯ್ಕ ಮಾತನಾಡಿ, ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ನಮ್ಮ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಸೊಸೈಟಿ ಸದಸ್ಯ ಸುರೇಶ ಭಟ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಡಾ. ಶ್ರೀನಿವಾಸ್ ಹರಿಕಾಂತ, ವಿದ್ಯಾರ್ಥಿ ಕಾರ್ಯದರ್ಶಿ ಶಿವಪ್ರಸಾದ್ ನಾಯಕ, ನಮನ ಕವರಿ, ರಂಜಿತಾ ಪಡವಲಕರ್ ವೇದಿಕೆಯಲ್ಲಿದ್ದರು.

ಯೂನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ ಸ್ವಾಗತಿಸಿ ಪರಿಚಯಿಸಿದರು. ಪ್ರಸಕ್ತ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ