ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆಯನ್ನು ವಿದ್ಯಾರ್ಥಿಗಳು ಅರಿಯಬೇಕು: ಖಾದರ್‌

KannadaprabhaNewsNetwork | Published : Jul 5, 2024 12:50 AM

ಸಾರಾಂಶ

ಸರ್ಕಾರಿ ಪ್ರೌಢಶಾಲೆ ಕೊಣಾಜೆಪದವು ಮತ್ತು ದ.ಕ. ಜಿಲ್ಲಾ ಪಂ. ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಪದವು ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗದ್ದೆಗಿಳಿದು ಕ್ರೀಡಾಕೂಟದಲ್ಲಿ ‌ತೊಡಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿ,‌ ಕೃಷಿ ಪರಂಪರೆಯನ್ನು‌ ವಿದ್ಯಾರ್ಥಿಗಳು ಅರಿತುಕೊಂಡು ಮುನ್ನಡೆಯಬೇಕು.‌ ನಮ್ಮ‌ ಮಣ್ಣಿನ ಸಂಸ್ಕೃತಿಗೆ ಪೂರಕವಾಗಿ ಜೀವನ‌ ನಡೆಸಿದರೆ ನಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಜೊತೆಗೆ ಆರೋಗ್ಯ ಪೂರ್ಣ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ, ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಕೊಣಾಜೆಯ ಕಲ್ಲಿಮಾರು ಬಳಿಯ ಕೆಳಗಿನ ಮನೆ ಗದ್ದೆಯಲ್ಲಿ ಮಂಗಳ ಗ್ರಾಮೀಣ ಯುವಕ ಸಂಘ (ರಿ) ಕೊಣಾಜೆ, ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಹಾಗೂ ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘ ಇವುಗಳ‌ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ಕೊಣಾಜೆ ಪದವು ಸರ್ಕಾರಿ ಶಾಲಾ‌ ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ವಿದ್ಯಾರ್ಥಿಗಳ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ, ಕೊಣಾಜೆ ಪಂಚಾಯಿತಿ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ, ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಗಳು ಹಡಿಲು ಬೀಳುತ್ತಿದ್ದು, ಹೆಚ್ಚಿನ ಗದ್ದೆಗಳು ತೋಟಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು, ಯುವ ಸಮುದಾಯ ಕೃಷಿಯ ಮಹತ್ವವನ್ನು ಅರಿತುಕೊಂಡು ಕೃಷಿ‌ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಕಾರ್ಯಕ್ರಮವನ್ನು ಹಿರಿಯ ಕೃಷಿಕೆ, ಮಾಜಿ ಪಂಚಾಯಿತಿ ಸದಸ್ಯೆ ಮುತ್ತು ಶೆಟ್ಟಿ ಅವರ ಪಾಡ್ದನದ ಮೂಲಕ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಾಡ್ದನ, ತುಳುನಾಡಿನ‌ ಕೃಷಿ ಸಂಸ್ಕೃತಿಯ ಬಗ್ಗೆ, ಕೃಷಿಕರ ಪರಿಶ್ರಮ ಹಾಗೂ ಕೃಷಿಯ ಮಹತ್ವದ ಬಗ್ಗೆ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ಅಧ್ಯಕ್ಷ ಡಾ. ಧನಂಜಯ‌ ಕುಂಬ್ಳೆ, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ, ಮುಖಂಡರಾದ‌ ಅಬ್ದುಲ್ ರಹಿಮಾನ್ ಕೋಡಿಜಾಲ್,‌ ಉಳ್ಳಾಲ ಜಮಿಯ್ಯತ್ತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ನಾಸೀರ್, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ. ಅಬ್ದುಲ್ ರಹಿಮಾನ್, ಕೊಣಾಜೆ ಪದವು ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ, ಪಂಚಾಯಿತಿ ಸದಸ್ಯ ದೇವಣ್ಣ ಶೆಟ್ಟಿ, ಕೃಷಿಕರಾದ‌ ದೇವದಾಸ್‌ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕರಾದ ಅಚ್ಯುತ ಗಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಕೊಣಾಜೆಪದವು ಮತ್ತು ದ.ಕ. ಜಿಲ್ಲಾ ಪಂ. ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಪದವು ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗದ್ದೆಗಿಳಿದು ಕ್ರೀಡಾಕೂಟದಲ್ಲಿ ‌ತೊಡಗಿಸಿಕೊಂಡರು.

Share this article