ಹೊನ್ನಾವರ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಂಕಗಳು ಅತಿ ಅಗತ್ಯ. ಆದರೆ ಅಂಕ ಗಳಿಸುವುದರ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ ಶಾಖಾ ಮಠದ ಬ್ರಹ್ಮಚರ್ಯ ನಿಶ್ಚಲಾನಂದನಾಥ ಶ್ರೀ ನುಡಿದರು.
ಜೀವನ ಸುಸೂತ್ರವಾಗಿ ನಡೆಯಲು ಶಿಸ್ತು ಅಳವಡಿಸಿಕೊಳ್ಳಬೇಕು. ಗುರಿ ಇಟ್ಟುಕೊಂಡು ರೂಪುರೇಷೆ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ನಾವು ಪರರಿಗೆ ಸ್ಪರ್ಧಿಗಳಾಗುವ ಬದಲು ನಮಗೆ ನಾವೇ ಸ್ಪರ್ಧಿಯಾದರೆ ಪ್ರಗತಿ ಸಾಧಿಸಬಹುದು ಎಂದು ನುಡಿದರು.
ನ್ಯೂ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್.ಎಸ್.ಎಲ್.ಸಿ. ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಈ ಶಾಲೆಯಿಂದ ತೆರಳುತ್ತಿರುವ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಸಮಾಜದಲ್ಲಿ ಗೌರವ ಸ್ಥಾನ ಗಳಿಸಿ. ಶಿಕ್ಷಕರ ಮತ್ತು ಸಿಬ್ಬಂದಿ ಶ್ರಮದಿಂದ ಶಾಲೆ ಉತ್ತಮ ಫಲಿತಾಂಶ ಗಳಿಸಿ ಸಾಧನೆ ಮಾಡುತ್ತಿದೆ ಎಂದರು.ಶಿಕ್ಷಣ ಇಲಾಖೆಯ ಅರುಣಕುಮಾರ, ನಿವೃತ್ತ ಮುಖ್ಯಾಧ್ಯಾಪಕ ಎಂ.ಟಿ.ಗೌಡ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ೪೫ ವಿದ್ಯಾರ್ಥಿಗಳನ್ನು, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಸ್ಥಾನಗಳಿಸಿದ ಈ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಾಧ್ಯಾಪಕಿ ಕಮಲಾ ನಾಯ್ಕ ಉಪಸ್ಥಿತರಿದ್ದರು.