ದೇವನಹಳ್ಳಿ: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಆಡಿಟೋರಿಯಂ ಪೂರ್ಣಗೊಳ್ಳಲು ಸುಮಾರು 50 ಲಕ್ಷ ರು. ಬೇಕಾಗಬಹುದು. ಈ ಕಟ್ಟಡವನ್ನು ಸರ್ಕಾರ ಅಥವಾ ಖಾಸಗಿ ಕಂಪನಿಗಳ ಸಿಎಸ್‌ಆರ್ ಫಂಡ್‌ನಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್ ತಿಳಿಸಿ, ಈ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಪ್ರಗತಿಯನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಿ. ಮಂಜಯ್ಯ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಕೇವಲ 30 ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಈಗ ಒಂದು ಸಾವಿರಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗೆ ಆಧ್ಯಾಪಕ ವೃಂದವೇ ಮುಖ್ಯ ಕಾರಣ ಎಂದು ತಿಳಿಸಿದರು.
ಸರ್ಕಾರದ ಆರ್ಥಿಕ ಇಲಾಖೆಯ ಪಿ. ವಿ. ಭೈರಪ್ಪ ಮಾತನಾಡಿದರು.ಜಿಲ್ಲಾಧಿಕಾರಿಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ. ರಾಜಣ್ಣ, ಸೋಮಶೇಖರ್ ಉಪಸ್ಥಿತರಿದ್ದರು, ಎನ್‌ಎಸ್ಎಸ್ ಘಟಕದ ಸಂಚಾಲಕ ಪ್ರೊ,ಕೆ.ಕೆ. ರವಿಚಂದ್ರ ಸ್ವಾಗತ ಕೋರಿದರು, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಪ್ರೊ. ಎಸ್‌ಎಂ. ರವಿಕುಮಾರ್ ನಿರೂಪಿಸಿದರು.