ಧಾರವಾಡ:
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ ಚಂದ್ರ, "ರಾಜ್ಯ ಸರ್ಕಾರದಿಂದ ಮಾಸಿಕ ₹15,000 ಗೌರವಧನ ನೀಡುವಂತೆ ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ನ. 15ರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮೈಕೊರೆಯುವ ಚಳಿ ಹಾಗೂ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಬೀದಿಯಲ್ಲಿ ಮಲಗಿ ನಡೆಸುತ್ತಿರುವ ಈ ತಾಯಂದಿರ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದೆ. ಯಾವುದೇ ಕಷ್ಟಗಳಿಗೆ ಎದೆಗುಂದದೆ ನಡೆಯುತ್ತಿರುವ ಅವರ ಈ ಸ್ಫೂರ್ತಿದಾಯಕ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಎರಡು ವರ್ಷಗಳ ಹಿಂದೆ ₹10,000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಮಾತು ತಪ್ಪುವ ಮೂಲಕ ವಿಶ್ವಾಸದ್ರೋಹ ಎಸಗಿದೆ. ''''ಹೋರಾಟ ಹಿಂಪಡೆಯಿರಿ, ಸಮಸ್ಯೆ ಬಗೆಹರಿಸುತ್ತೇವೆ'''' ಎಂಬ ಮುಖ್ಯಮಂತ್ರಿಗಳ ಮೌಖಿಕ ಭರವಸೆಗಳಿಗೆ ಮಣಿಯದೆ, ಅಧಿಕೃತ ಸರ್ಕಾರಿ ಆದೇಶಕ್ಕಾಗಿ ಪಟ್ಟು ಹಿಡಿದಿರುವ ಆಶಾ ಕಾರ್ಯಕರ್ತೆಯರ ನಿಲುವು ಅತ್ಯಂತ ನ್ಯಾಯಯುತವಾಗಿದೆ " ಎಂದು ಹೇಳಿದರು.ಆಶಾ ಕಾರ್ಯಕರ್ತೆಯರ ಹೋರಾಟದಿಂದ ಸ್ಫೂರ್ತಿ ಪಡೆದು, ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮುಂದಾಗಿರುವ ಸರ್ಕಾರ ಎಡಿಬಿ ಸಾಲದ ಒಪ್ಪಂದ ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಬಲಿಷ್ಠ ಹೋರಾಟ ಕಟ್ಟಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳು ಮುಂದಾಗಬೇಕೆಂದು ಕರೆ ನೀಡಿದರು.