ಕನ್ನಡಪ್ರಭ ವಾರ್ತೆ ಮಂಗಳೂರು ಅಡಕೆ ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಅಧ್ಯಯನ ವರದಿ ಪುನರುಚ್ಚರಿಸಿರುವುದು ವಿವಾದಕ್ಕೆ ಒಳಗಾದ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರ ಅಡಕೆಯ ಆರೋಗ್ಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ.
ಅಡಕೆಯ ಕುರಿತು ವೈಜ್ಞಾನಿಕ ಸಂಶೋಧನೆ ಮತ್ತು ಮಾನವ ಆರೋಗ್ಯ ಎಂಬ ಶೀರ್ಷಿಕೆಯಡಿ ಅಧ್ಯಯನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಡಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರ ಆಸಕ್ತಿ ಹೊಂದಿದೆ. ಈ ಅಧ್ಯಯನ ಸಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ. ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್(ಎಐಐಎಂಎಸ್) ಸೇರಿದಂತೆ ವೈದ್ಯಕೀಯ ಸಂಶೋಧನೆ ಜೊತೆಗೆ ಇತರೆ ಸಂಸ್ಥೆಗಳೂ ಅಡಕೆಯ ಪರಿಣಾಮದ ಬಗ್ಗೆ ಸಮಗ್ರ ಸಂಶೋಧನೆ ನಡೆಸಲಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.
ಅಡಕೆ ಬೆಳೆಗಾರರು ಈಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವು ಇದೆ ಎಂದು ಹೇಳಿರುವ ಸಚಿವರು, ಅಡಕೆ ಆರೋಗ್ಯದ ಪರಿಣಾಮ ಕುರಿತ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಕೆಲವು ಸಂಶೋಧನಾ ಪ್ರಬಂಧಗಳು ಮಿತಿಯನ್ನು ಹೊಂದಿವೆ. ಹೀಗಾಗಿ ಆಗಾಗ ಕೆಲವು ವಿರೋಧವಾದ ವರದಿಗಳು ಪ್ರಕಟವಾಗುತ್ತಿವೆ. ಹೀಗಾಗಿ ಮತ್ತೊಮ್ಮೆ ಪ್ರತ್ಯೇಕ ಅಧ್ಯಯನ ನಡೆಯಲಿದೆ ಎಂದು ತಿಳಿಸಲಾಗಿದೆ.ವಿಶ್ವ ಆರೋಗ್ಯ ಸಂಸ್ಥೆಯ ಹೆಚ್ಚಿನ ವರದಿಗಳಲ್ಲಿ ಹುಡಿ ಅಡಕೆ(ಕ್ವಿಡ್) ಮತ್ತು ಗುಟ್ಕಾದಂತಹ ಮಿಶ್ರಣಗಳಿಂದ ಆರೋಗ್ಯದ ಮೇಲಿನ ಪರಿಣಾಮಗಳನ್ನು ಉಲ್ಲೇಖಿಸಿದೆ. ಅದರಲ್ಲಿ ಇತರೆ ಪದಾರ್ಥಗಳ ಜೊತೆ ಅಡಕೆಯನ್ನು ಹೆಸರಿಸಲಾಗಿದೆ. ಅಡಕೆ ಪ್ರತ್ಯೇಕ ಸೇವನೆಯಿಂದ ಮಾನವನ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಅದಕ್ಕಾಗಿಯೇ ಪ್ರತ್ಯೇಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಡಕೆಯನ್ನು ಕ್ಯಾನ್ಸರ್‌ಕಾರಕ ಪಟ್ಟಿಯಿಂದ ಹೊರತರಲು ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಈಗಾಗಲೇ ಸಂಬಂಧಿತ ಸಚಿವರು, ಸಂಸದರಿಗೆ ಪತ್ರ ಬರೆದು ಈ ಬಗ್ಗೆ ಸಂಶೋಧನೆಗೆ ಒತ್ತಾಯಿಸಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ. ಅಡಕೆ ಕ್ಯಾನ್ಸರ್ ನಿವಾರಕ ಎಂಬ ಬಗ್ಗೆ ಕೃಷಿಮಾರುಕಟ್ಟೆ ತಜ್ಞರು, ಆರ್ಥಿಕ ತಜ್ಞರ ಬರಹಗಳು ಕೂಡ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿರುವುದು ಉಲ್ಲೇಖನೀಯ.