ತುಮಕೂರು ವಿಶ್ವವಿದ್ಯಾಲಯದ 5 ವಿದ್ಯಾರ್ಥಿಗಳಿಂದ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ಗೆ ಪ್ರವಾಸ

KannadaprabhaNewsNetwork |  
Published : Nov 09, 2024, 01:19 AM ISTUpdated : Nov 09, 2024, 10:42 AM IST
ಇಂಗ್ಲೆಂಡ್ ಪ್ರವಾಸದ ಸುದ್ದಿಗೆ ಈ ಫೋಟೋ | Kannada Prabha

ಸಾರಾಂಶ

ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ಗೆ ಶನಿವಾರದಿಂದ ನ. 23ರವರೆಗೆ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.  

  ತುಮಕೂರು : ಬ್ರಿಟಿಷ್ ಕೌನ್ಸಿಲ್‌ನವರು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ಗೆ ಶನಿವಾರದಿಂದ ನ. 23ರವರೆಗೆ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.

ನಗರದ ವಿವಿಯಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶೈಕ್ಷಣಿಕ ಪ್ರವಾಸದ ಕುರಿತು ಮಾಹಿತಿ ನೀಡಿದ ಅವರು, ರಾಜ್ಯ ಉನ್ನತ ಶಿಕ್ಷಣದ ಕಾರ್ಯಕ್ರಮವಾದ ಸ್ಕೌಟ್ (ಸ್ಕಾಲರ್ ಫಾರ್ ಔಟ್‌ಸ್ಟ್ಯಾಂಡಿಂಗ್‌ ಅಂಡರ್ ಗ್ರಾಜ್ಯುಯೇಟ್ ಟ್ಯಾಲೆಂಟ್) ಅಡಿಯಲ್ಲಿ ಅಧ್ಯಯನ ಪ್ರವಾಸದ ಮೊದಲ ಹಂತದಲ್ಲಿ ರಾಜ್ಯದ ಐದು ವಿವಿಗಳ 30 ವಿದ್ಯಾರ್ಥಿಗಳು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. 

ಈ ಪೈಕಿ ತುಮಕೂರು ವಿವಿಯ ಐದು ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿರುವುದು ಅವರ ಮತ್ತು ವಿವಿಯ ಭವಿಷ್ಯದ ತಿರುವಿನ ಹಂತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರವಾಸದ ವೀಸಾ, ಇತರೆ ಖರ್ಚುಗಳನ್ನು ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. ₹6 ಲಕ್ಷ ಪ್ರಯಾಣ ವೆಚ್ಚವನ್ನು ತುಮಕೂರು ವಿವಿಯಿಂದ ಭರಿಸಲಿದ್ದೇವೆ. ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಹಿರಿಯ ಪ್ರಾಧ್ಯಾಪಕ ಪ್ರೊ. ಪರಶುರಾಮ ಕೆ. ಜಿ. ಅವರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ ಸಿಗುವ ಮುಖ್ಯ ಉದ್ದೇಶ ನಮ್ಮ ವಿವಿಯದ್ದಾಗಿದೆ ಎಂದು ತಿಳಿಸಿದರು.

ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆಯಬೇಕು. ಮುಗ್ಧತೆಯಿಂದ ಪ್ರಬುದ್ಧತೆಗೆ ಪದೋನ್ನತಿಗೊಳಿಸುವ ಪ್ರವಾಸ ಇದಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರೊ. ಪರಶುರಾಮ ಕೆ. ಜಿ. ಮಾತನಾಡಿ, ಪಿಯುಸಿ ಹಂತದಲ್ಲಿ ಹೆಚ್ಚು ಅಂಕಗಳಿಸಿರುವ ಬಿಎಸ್‌ಡಬ್ಯ್ಲು, ಬಿಕಾಂ, ಬಿಸಿಎ, ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕಲಾ ಕಾಲೇಜಿನ ಬಿಎಸ್‌ಡಬ್ಯ್ಲುವಿಭಾಗದ ಧನ್ಯ ಆರ್., ಬಿಕಾಂ ವಿದ್ಯಾರ್ಥಿಗಳಾದ ಅಲ್ಫಿಯಾ ಕುಲ್ಸುಮ್, ನಾರಾಯಣಗೌಡ ಎಸ್. ಎಚ್., ಬಿಸಿಎ ವಿಭಾಗದ ನೇಹಾ ಎಂ., ವಿಜ್ಞಾನ ಕಾಲೇಜಿನ ಬಿಎಸ್ಸಿ ಶಿವಶಂಕರ್ ಎಚ್. ಟಿ. ಪ್ರವಾಸಕ್ಕೆ ಹೊರಡಲು ಸಿದ್ಧವಾಗಿದ್ದಾರೆ ಎಂದು ತಿಳಿಸಿದರು.

ಸಂಪೂರ್ಣ ಪ್ರಯಾಣದ ಖರ್ಚು ಒಬ್ಬ ವಿದ್ಯಾರ್ಥಿಗೆ ಸುಮಾರು ₹8 ಲಕ್ಷದವರೆಗೂ ಆಗಬಹುದು. ಅದನ್ನು ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ನ ಶೈಕ್ಷಣಿಕ ವಿದೇಶ ಪ್ರವಾಸದಲ್ಲಿ ಕೌಶಲ್ಯ ಆಧಾರಿತ, ಉದ್ಯಮಶೀಲತಾ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. 

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಯಣ್ಣ ಬಿ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರಿಗೆ ಐಪಿಎಲ್‌ 3 ಟಿಕೆಟ್ ಫ್ರೀ
ಲೆಕ್ಕಕ್ಕಿಲ್ಲದ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಇಂದು