ಗದಗ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯಾರ್ಜನೆಯ ಹಂತ ಮಹತ್ವದ್ದಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿನಿಯರು ಕೀಳರಿಮೆ ತೊರೆದು ಕ್ರಿಯಾಶೀಲತೆಯಿಂದ ಅಧ್ಯಯನಗೈದರೆ ಯಾವ ಕಷ್ಟವಿಲ್ಲದೆ ಯಶಸ್ಸು ಸಾಧಿಸಬಹುದು ಎಂದು ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆಯ ನೇತ್ರ ತಜ್ಞೆ ಡಾ. ರಶ್ಮಿ ಹುಯಿಲಗೋಳ ಹೇಳಿದರು.
ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ನೆರವೇರಿದ ವಿದ್ಯಾದಾನ ಸಮಿತಿ ಬಾಲಕಿಯರ ಪಪೂ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿನಿಯರಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸದ ಕೊರತೆ ಕಂಡುಬರುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ತಾವು ಪುರುಷರಿಗಿಂತ ಯಾವುದೇ ಸಾಮರ್ಥ್ಯದಲ್ಲಿ ಕಡಿಮೆ ಇಲ್ಲ ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ತೋರಿಸಬೇಕು. ಮಹಿಳೆಯರು ಪುರುಷರಿಗಿಂತ ಹೆಚ್ಚು ತಾಳ್ಮೆ ಮತ್ತು ಏಕಕಾಲದಲ್ಲಿ ಬಹುಕಾರ್ಯ ನಿರ್ವಹಿಸುವ ಕಾರ್ಯಕ್ಷಮತೆ ಮತ್ತು ದಕ್ಷತೆ ಹೊಂದಿರುತ್ತಾರೆ. ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಪದವಿಪೂರ್ವ ಹಂತದಲ್ಲಿ ಜ್ಞಾನ ಮತ್ತು ಕೌಶಲ್ಯ ಉಪಯೋಗಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇಎಸ್ಐ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ವಿದ್ಯಾದಾನ ಸಮಿತಿ ಆಡಳಿತ ಮಂಡಳಿ ಸದಸ್ಯ ಡಾ. ಪವನ ಹುಯಿಲಗೋಳ ಮಾತನಾಡಿ, ಈಗ ಕಲಾಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿನಿಯರು ಹೆಚ್ಚು ಅಧ್ಯಯನಗೈದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆರ್ಥಿಕವಾಗಿ ಸಬಲರಾಗಿ ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದರು.ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಿಗೆ ಪ್ರಾಚಾರ್ಯ ಡಾ. ಬಿ.ಎಸ್. ರಾಠೋಡ ಪ್ರತಿಜ್ಞಾವಿಧಿ ಬೋಧಿಸಿದರು.
ಭೂಮಿಕಾ ಚವ್ಹಾಣ ಪ್ರಾರ್ಥಿಸಿದರು. ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುರಸ್ಕಾರ ಕಾರ್ಯಕ್ರಮವನ್ನು ಬಿ.ಬಿ. ಮಿರ್ಜಿ ನಿರ್ವಹಿಸಿದರು. ಡಾ. ದತ್ತಪ್ರಸನ್ನ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು.ಪವಿತ್ರಾ ಇಬ್ರಾಹಿಂಪುರ, ವರ್ಷಾ ಜಾಧವ ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯಾ ತಮ್ಮನಗೌಡರ ವಂದಿಸಿದರು. ಉಪನ್ಯಾಸಕ ಪ್ರಶಾಂತ ಪಾಟೀಲ, ತೆಹಮೀಮ ನದಾಫ, ಅಶ್ವಿನಿ ಜಾಧವ, ಹೇಮಂತ ದಳವಾಯಿ, ಸಮೀರ ಹಂದಿಗೋಳ, ಬಸವರಾಜ ಬಾರಕೇರ ಮುಂತಾದವರು ಹಾಜರಿದ್ದರು.