ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗಣಿ ಮಾಲೀಕರು, ಅದಿರು ಸಾಗಾಣಿಕೆದಾರರು ಮತ್ತು ಗ್ರಾಮಸ್ಥರೊಂದಿಗಿನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಉಪ ವಿಭಾಗಾಧಿಕಾರಿಗಳು ಉಪ ಸಮಿತಿಯಲ್ಲಿ ಇರುತ್ತಾರೆ ಎಂದರು.
ಕಬ್ಬಿಣದ ಅದಿರು ತುಂಬಿದ ಲಾರಿಗಳು ಚಿತ್ರದುರ್ಗ ತಾಲೂಕಿನ ಕಡ್ಡೆಗುದ್ದು ಹಾಗೂ ಸಾಸಲು ಗ್ರಾಮಗಳ ಮುಖಾಂತರ ಸಂಚರಿಸುವಾಗ ಆಗುತ್ತಿರುವ ತೊಂದರೆ ಹಾಗೂ ವಾಹನಗಳನ್ನು ಪದೇ ಪದೇ ತಡೆದು ಪ್ರತಿಭಟನೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಯಾರು ಕೂಡ ಸಾರ್ವಜನಿಕ ರಸ್ತೆ ತಡೆ ಯುವುದಕ್ಕೆ ಅವಕಾಶವಿಲ್ಲ. ಸಮಸ್ಯೆಗಳು ಇದ್ದರೆ ಜಿಲ್ಲಾಡಳಿತದ ಬಳಿ ನಿವೇದಿಸಿಕೊಳ್ಳಬೇಕೆಂದರು.ಗಣಿಬಾಧಿತ ಪ್ರದೇಶಗಳ ಸ್ಥಳೀಯ ಗ್ರಾಮಸ್ಥರಿಗೂ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಮಸ್ಥರಿಗೆ ದೂಳಿನ ಸಮಸ್ಯೆ, ಕೃಷಿ ಚಟುವಟಿಕೆಗಳಿಗೆ ಆಗುತ್ತಿರುವ ತೊಂದರೆ, ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ದಟ್ಟಣೆ ಇತ್ಯಾದಿ ವಿಚಾರಗಳಿಗೆ ಸಂಬಂಧಪಟ್ಟಂತೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಉಪ ಸಮಿತಿ ಶ್ರಮಿಸಲಿದೆ ಎಂದರು.
ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಸಿಎಸ್‍ಆರ್ ನಿಧಿ ಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಗಮನ ಹರಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗಣಿ ಪ್ರದೇಶಗಳ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಕ್ರಮ, ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಕಳೆದ ಕೆಲವು ತಿಂಗಳ ಹಿಂದೆ ಅದಿರು ತುಂಬಿದ ಲಾರಿಗಳ ಸಂಚಾರಕ್ಕೆ ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯ ಗ್ರಾಮಸ್ಥರು ತಡೆ ಮಾಡಿದ ದೂರುಗಳು ಬಂದಿದ್ದವು. ಸಾರ್ವಜನಿಕರ ರಸ್ತೆಯ ವಾಹನ ಸಂಚಾರವನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ತಡೆದರೆ ಕಾನೂನು ಚೌಕಟ್ಟಿನಲ್ಲಿ ಎಫ್‍ಐಆರ್ ದಾಖಲಿಸಬಹುದು ಎಂದರು.
ಜಾನ್ ಮೈನ್ಸ್ ಧನಂಜಯ ಮಾತನಾಡಿ, ಕಳೆದ ಐದು ತಿಂಗಳಿಂದ ಕಬ್ಬಿಣದ ಅದಿರು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೊಸಪೇಟೆ ಯಿಂದ ಅದಿರು ತಂದು ಘಟಕ ನಡೆಸಲಾಗುತ್ತಿದ್ದು, ತೊಂದರೆ ಉಂಟಾಗಿದೆ. ಹೀಗಾಗಿ ಸ್ಥಳೀಯವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.