ಕಾಂಗ್ರೆಸ್‌ನ ಲಿಂಬಿಕಾಯಿ ಸೇರಿ ಐವರ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Oct 06, 2026, 02:00 AM IST
ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಕೊಟಗಿ ನಾಮಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಲು ಒಂದು ದಿನ ಬಾಕಿ ಇದ್ದು, ಚುನಾವಣಾ ಕಾವು ಏರುತ್ತಿದೆ. ಸೋಮವಾರ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಸೇರಿದಂತೆ ಐವರು ನಾಮಪತ್ರ ಸಲ್ಲಿಸಿದರು.

ಧಾರವಾಡ:

ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಲು ಒಂದು ದಿನ ಬಾಕಿ ಇದ್ದು, ಚುನಾವಣಾ ಕಾವು ಏರುತ್ತಿದೆ. ಸೋಮವಾರ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಸೇರಿದಂತೆ ಐವರು ನಾಮಪತ್ರ ಸಲ್ಲಿಸಿದರು.

ಪಕ್ಷದ ಮುಖಂಡರು, ಸಹಕಾರ ಸಚಿವ ಲಕ್ಷ್ಮಣ ಸವದಿ, ಕಾರ್ಮಿಕ ಸಚಿವ ಸಂತೋಷ ಲಾಡ್‌, ಶಾಸಕರಾದ ಎಚ್‌.ಕೆ. ಪಾಟೀಲ, ಎನ್‌.ಎಚ್‌. ಕೋನರಡ್ಡಿ, ಎಫ್‌.ಎಚ್‌. ಜಕ್ಕಪ್ಪನವರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ ಮತ್ತಿತರೊಂದಿಗೆ ಭರ್ಜರಿ ಮೆರವಣಿಯೊಂದಿಗೆ ಮೋಹನ ಲಿಂಬಿಕಾಯಿ ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದರು. ಜೊತೆಗೆ ಇಡೀ ಕಾಂಗ್ರೆಸ್‌ ಪಕ್ಷದ ನಾಯಕರು ಈ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದು, ಇದು ಗೆಲುವಿನ ದ್ಯೋತಕ. ಹುರುಪಿನಿಂದ ಪಕ್ಷದ ಕಾರ್ಯಕರ್ತರು ದುಡಿಯುತ್ತಿದ್ದು ಈ ಚುನಾವಣೆಯಲ್ಲಿ ಖಂಡಿತ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಹೋರಾಟಗಾರ:

ಇನ್ನು, ರಾಜ್ಯ ಸರ್ಕಾರದಲ್ಲಿರುವ ಲಕ್ಷಗಟ್ಟಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ವಿದ್ಯಾರ್ಥಿಗಳ ಇತರೆ ಬೇಡಿಕೆಗಳಿಗಾಗಿ ಹೋರಾಟ ನಡೆಸಿ ವಿದ್ಯಾರ್ಥಿ ಸಂಘಟನೆ ಕಟ್ಟಿರುವ ಕಾಂತಕುಮಾರ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವಕರ, ಪದವೀಧರರ ಪರವಾಗಿ ಹೋರಾಟ ಮಾಡಿದ್ದೇನೆ. ಕೆಪಿಎಸ್ಸಿ ಹಗರಣವನ್ನು ಹೊರ ತಂದಿದ್ದೇನೆ. ಜತೆಗೆ ಚುನಾವಣೆಗೆ ಪೂರಕವಾಗಿ ಪದವೀಧರರ ಮತದಾರರನ್ನು ಸಹ ಮಾಡಿಸಿದ್ದು, ನನಗೆ ದೊಡ್ಡ ಮಟ್ಟದ ಬೆಂಬಲ ಸಿಗಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.

ಅಂತೆಯೇ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಿಶಾಂತ ಬಂಕಾಪೂರ ಹಾಗೂ ಪಕ್ಷೇತರರಾಗಿ ಬಸವರಾಜ ಕೊಟಗಿ ಮತ್ತು ಜಿಶಾನ್‌ ಶಿರಸಂಗಿ ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಿದರು. ಈ ವರೆಗೆಒಟ್ಟು 8 ಅಭ್ಯರ್ಥಿಗಳಿಂದ ಒಟ್ಟು 14 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಕೆಗೆ ಅ. 6 ಕೊನೆ ದಿನವಾಗಿದ್ದು ಬಿಜೆಪಿಯಿಂದ ಎಸ್‌.ವಿ. ಸಂಕನೂರ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಬೆಂಬಲವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಇತರೆ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹಾಗೆಯೇ, ಮಂಗಳವಾರ ಅಹಿಂದ್‌ ಸಂಘಟನೆಯಿಂದ ಡಾ. ಕುಬೇರಪ್ಪ ಸಹ ಸಲ್ಲಿಸಲಿದ್ದಾರೆ.ಚುನಾವಣಾ ವೀಕ್ಷಕರಾಗಿ ಡಾ. ವಿಶಾಲ ನೇಮಕ

ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್‌ನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಿಂದ ನಡೆಯಲಿರುವ ಚುನಾವಣೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಡಾ. ವಿಶಾಲ ಆರ್. ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಹವಾಲನ್ನು ತಿಳಿಸುವುದಿದ್ದಲ್ಲಿ, ಹುಬ್ಬಳ್ಳಿಯ ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಪೋರೆಟ್ ಆಫೀಸ್‌ನ ಪ್ರಧಾನ ವ್ಯವಸ್ಥಾಪಕ ಮಹಮ್ಮದ ಕೈಝರ್ 9164055006) ಮೂಲಕ ಚುನಾವಣಾ ವೀಕ್ಷಕರನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡವಾಡದಲ್ಲಿ ರಸ್ತೆ ಹದಗೆಟ್ಟು ಸಂಚಾರ ದುಸ್ತರ
ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ವಂಚನೆ: ಆರೋಪ