ಉಡುಪಿ: ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ - 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ - 2031 ವರದಿಯನ್ನು ಅಧಿಕಾರಿಗಳು ನಿಖರ ದತ್ತಾಂಶಗಳನ್ನು ಕಾಲಮಿತಿಯ ಒಳಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚಿಸಿದ್ದಾರೆ. ರಜತಾದ್ರಿಯ ಜಿಪಂ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ- 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ- 2031 ವರದಿಯನ್ನು ಸಿದ್ಧಪಡಿಸುವ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.ಜಿಲ್ಲೆಯ ಶಿಕ್ಷಣ, ಆರೋಗ್ಯ, ಪೋಷಣಾ ಸ್ಥಿತಿ, ಮೂಲಸೌಕರ್ಯ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಪರಿಸರದ ಸುಸ್ಥಿರತೆ ಸೇರಿದಂತೆ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಈ ವರದಿಗಳ ಪ್ರಮುಖ ಗುರಿಯಾಗಿದ್ದು, ಅತೀ ಪ್ರಾಮುಖ್ಯ ದಾಖಲೆಗಳಾಗಿವೆ. ಎಲ್ಲ ಇಲಾಖಾಧಿಕಾರಿಗಳು ಇದರ ತಯಾರಿಕೆಯ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು, ನೀಡುವ ದತ್ತಾಂಶಗಳು ಗ್ರಾಪಂ ಹಂತದಿಂದಲೇ ಮಾನವ ಅಭಿವೃದ್ಧಿಗೆ ಒತ್ತು ನೀಡುವಂತಿರಬೇಕು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ- 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ- 2031 ವರದಿ ನೀಡುವಾಗ ಎಲ್ಲ ಇಲಾಖೆಗಳು ಸಂಬಂಧಪಟ್ಟ ಮಾಹಿತಿಯೊಂದಿಗೆ ಭಾಗವಹಿಸಬೇಕು. ಇದರೊಂದಿಗೆ ಫೀಡ್ ಬ್ಯಾಕ್‌ಗಳನ್ನು ನೀಡಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸ್ ರಾವ್ ಮಾತನಾಡಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ಅತ್ಯಂತ ಮಹ್ವತ್ವವಾದ ಮೌಲ್ಯವಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿದ್ದಲ್ಲಿ ಇದು ಜಿಲ್ಲೆಯು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಯೋಜನೆ ರೂಪಿಸುವಾಗ ಎದುರಾಗುವ ಸಮಸ್ಯೆಗಳನ್ನು ತಿಳಿಸಬಹುದು. ಹೊಸ ವಿನೂತನ ಯೋಜನೆಗಳನ್ನೂ ಸಹ ಗುರುತಿಸಿ, ಮಾಹಿತಿ ನೀಡಬಹುದು. ಜೊತೆಗೆ ವರದಿಯೊಂದಿಗೆ ಜನರನ್ನು ಆಕರ್ಷಿಸುವಂತಹ ಸ್ಥಳೀಯ ಕಲೆ, ಸಂಸ್ಕೃತಿ, ವೇಷಭೂಷಣಗಳನ್ನು ಒಳಗೊಂಡ ಛಾಯಾಚಿತ್ರಗಳನ್ನು ನೀಡಿದ್ದಲ್ಲಿ ವರದಿಗೆ ಹೆಚ್ಚಿನ ಮಹತ್ವ ದೊರೆಯಲಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಉದಯ್ ಕುಮಾರ್, ಯೋಜನೆಯ ಅನುಷ್ಠಾನಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.